ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೊಸ ಸಮಿತಿ

ಮಂಗಳವಾರ, 26 ಏಪ್ರಿಲ್ 2022 (16:32 IST)
ಸತತ 2 ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು, ಹಲವು ರಾಜ್ಯಗಳಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಂಡ ಕಾಂಗ್ರೆಸ್,
 
ಇದೀಗ 2024ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಎದುರಾಗಬಹುದಾದ ರಾಜಕೀಯ ಸವಾಲುಗಳನ್ನು ಮೆಟ್ಟಿನಿಲ್ಲಲು ‘ಉನ್ನತಾಧಿಕಾರವುಳ್ಳ ಕಾರ್ಯಪಡೆ- 2024’ ರಚಿಸಿದೆ.

ಜೊತೆಗೆ ದೇಶದ ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲು ಮೇ 13ರಿಂದ ರಾಜಸ್ಥಾನದ ಉದಯ್ಪುರದಲ್ಲಿ 3 ದಿನಗಳ ಚಿಂತನ ಶಿಬಿರ ಆಯೋಜನೆಗೂ ನಿರ್ಧರಿಸಿದೆ. ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಆಹ್ವಾನಿತ ಸದಸ್ಯರು ಭಾಗಿಯಾಗಲಿದ್ದಾರೆ.

ವಿಶೇಷವೆಂದರೆ, 2024ರ ಚುನಾವಣೆ ಗೆಲ್ಲುವ ರಣತಂತ್ರಗಳ ಕುರಿತು, ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಇತ್ತೀಚೆಗಷ್ಟೇ ಸೋನಿಯಾ ಗಾಂಧಿ ಒಳಗೊಂಡ ಪಕ್ಷದ ಹಿರಿಯ ನಾಯಕರ ತಂಡಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದರು. ಮತ್ತೊಂದೆಡೆ ಇಂಥದ್ದೇ ವಿಷಯದ ಕುರಿತು ವರದಿ ಸಲ್ಲಿಸಲು ಸ್ವತಃ ಸೋನಿಯಾ ಕೂಡಾ 8 ಜನರ ಸಮಿತಿ ರಚಿಸಿದ್ದು, ಅದು ಏ.21ರಂದು ತನ್ನ ವರದಿ ಸಲ್ಲಿಸಿತ್ತು.

ಈ ವರದಿಗಳ ಬಗ್ಗೆ ಚರ್ಚಿಸಲು ಸೋನಿಯಾ ನೇತೃತ್ವದಲ್ಲಿ ಮಂಗಳವಾರ ಪಕ್ಷದ ಹಿರಿಯ ನಾಯಕರು ಇಲ್ಲಿ ಸಭೆ ಸೇರಿದ್ದರು. ಅದರಲ್ಲಿ ಎರಡೂ ವರದಿಗಳ ಬಗ್ಗೆ ಚರ್ಚಿಸಿದ ಬಳಿಕ, ‘ಉನ್ನತಾಧಿಕಾರವುಳ್ಳ ಕಾರ್ಯಪಡೆ- 2024’ ರಚನೆ ಮತ್ತು ಉದಯ್ಪುರದಲ್ಲಿ ಚಿಂತನ ಶಿಬಿರ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆ ಬಳಿಕ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ