ನವದೆಹಲಿ: ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯಿಂದ ನ್ಯಾ.ಎ.ಎಸ್ ಓಕಾ ಹಿಂದೆ ಸರಿದಿದ್ದಾರೆ.
ಇಂದು ವಿಚಾರಣೆ ವೇಳೆ ತಾವು ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಸ್ಪಷ್ಟಪಡಿಸಿದರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದುವ ಮುನ್ನ ಹೈಕೋರ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೇಳೆ ಇದೇ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ ಎ.ಎಸ್ ಓಕಾ ಆರು ವಾರಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಆದೇಶ ನೀಡಿದ್ದರು.
ಈ ಅದೇಶವನ್ನೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿರುವ ಹಿನ್ನೆಲೆ ಮತ್ತದೇ ಪ್ರಕರಣದ ವಿಚಾರಣೆ ನಡೆಸಲ್ಲ ಎಂದು ಅವರು ಹೇಳಿದ್ದಾರೆ.
ಸದ್ಯದ ಈ ಬೆಳವಣಿಗೆಯಿಂದ ವಿಚಾರಣೆ ಮತ್ತಷ್ಟು ವಿಳಂಬವಾಗಲಿದೆ. ನ್ಯಾ.ಎ.ಎಸ್ ವಿಚಾರಣೆಗೆ ನಿರಾಕರಿಸಿರುವ ಹಿನ್ನೆಲೆ ಈಗ ಈ ಅರ್ಜಿ ಬೇರೊಂದು ಪೀಠದಲ್ಲಿ ಲೀಸ್ಟ್ ಆಗಬೇಕಿದ್ದು ಅಲ್ಲಿಯ ವರೆಗೂ ಪ್ರಕರಣದ ವಿಚಾರಣೆ ನಡೆಯಲ್ಲ.
ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ ಹಲವು ತಿಂಗಳುಗಳೇ ಕಳೆದರೂ ಈವರೆಗೂ ಈ ಬಗ್ಗೆ ವಿಸ್ತೃತ ವಿಚಾರಣೆ ನಡೆದಿಲ್ಲ ಹೀಗಾಗಿ ಚುನಾವಣೆ ಮತ್ತಷ್ಟು ವಿಳಂಬವಾಗಲಿದೆ.
ನಂತರ ರಾಜ್ಯ ವಿಧಾನಸಭೆಯು ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ 243 ವಾರ್ಡ್ಗಳಿಗೆ ಚುನಾವಣೆ ನಡೆಸಬೇಕು ಎಂಬ ನಿರ್ಣಯ ಅಂಗೀಕರಿಸಿತ್ತು. ಅಲ್ಲದೇ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರ್ರಿಂ ಕೋರ್ಟ್ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ಹಿನ್ನೆಲೆಯಲ್ಲಿ ಅಂದಿನ ಸಿಜೆಐ ಎಸ್.ಎ. ಬೊಬ್ಡೆ ನೇತೃತ್ವದ ಪೀಠವು ಚುನಾವಣೆಗೆ ತಡೆ ನೀಡಿತ್ತು.