ಅ.5ಕ್ಕೆ ದೆಹಲಿಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭೇಟಿ

ಮಂಗಳವಾರ, 5 ಅಕ್ಟೋಬರ್ 2021 (08:55 IST)
ಬೆಂಗಳೂರು  :  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕರೆಯ ಮೇರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಕ್ಟೋಬರ್ 5 ರಂದು ದೆಹಲಿಗೆ ತೆರಳಲಿದ್ದಾರೆಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ 12.30ಕ್ಕೆ ಸೋನಿಯಾ ಅವರ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಹೀಗಾಗಿ, ಬೆಳಿಗ್ಗೆ 7.30ರ ವಿಮಾನದಲ್ಲಿ ಬೆಂಗಳೂರಿನಿಂದ ತೆರಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ದೆಹಲಿಗೆ ಬರುವಂತೆ ಸೋನಿಯಾ ಗಾಂಧಿ ಅವರಿಂದ ದಿಢೀರ್ ಆಹ್ವಾನ ಬಂದಿದೆ. ಯಾವ ವಿಷಯ ಕುರಿತು ಚರ್ಚಿಸಲು ಎಂಬ ಬಗ್ಗೆ ಮಾಹಿತಿ ಇಲ್ಲ. ಉಪ ಚುನಾವಣೆ ನಡೆಯಲಿರುವ ಹಾನಗಲ್ ಕ್ಷೇತ್ರದ ಟಿಕೆಟ್ ಹಂಚಿಕೆ, ಕೆಪಿಸಿಸಿ ಪುನರ್ ರಚನೆ ಹಾಗೂ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ' ಎಂದೂ ಮೂಲಗಳು ಹೇಳಿವೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಇತ್ತೀಚೆಗಷ್ಟೇ ದೆಹಲಿಗೆ ಬೇಟಿ ನೀಡಿದ್ದರು. ಈ ವೇಳೆ ಪಕ್ಷದ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಕೇಂದ್ರ ನಾಯಕತ್ವದೊಂದಿಗೆ ಕೆಪಿಸಿಸಿ ಪುನರ್ ರಚನೆ ಕುರಿತು ಸುದೀರ್ಘ ಚರ್ಚೆಗಳನ್ನು ನಡೆಸಿದ್ದರು.
ಈ ಹಿಂದೆ ಆಯುಧ ಪೂಜೆಗೂ ಮುನ್ನ ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ಪಕ್ಷ ಘೋಷಿಸಿತ್ತು. ಈ ಮೂಲಕ ಪಕ್ಷವು ಪುನರುಜ್ಜೀವನವನ್ನು ಕೈಗೊಳ್ಳುವ ನಿರೀಕ್ಷೆಯಿದೆ ಮತ್ತು ಅದೇ ವೇಳೆ 2023 ವಿಧಾನಸಭಾ ಚುನಾವಣೆಗೆ ಸಿದ್ಧಗೊಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ