ನವದೆಹಲಿ: ಕಾಂಗ್ರೆಸ್‌ಗೆ ನೆರೆಯ ದೇಶ ಪಾಕಿಸ್ತಾನದ ಮೇಲಿನ ಅತಿಯಾದ ಪ್ರೀತಿಯಿಂದಾಗಿ ಕಾಂಗ್ರೆಸ್ ಪಕ್ಷ 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರ ದಾಳಿಯಂತಹ ಭೀಕರ ಘಟನೆಯ ನಂತರವೂ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ, ಭಾರತ ನೆರೆಯ ದೇಶಗಳ ಜತೆಗಿನ ಸಂಬಂಧವನ್ನು ಸುಧಾರಿಸಿಕೊಳ್ಳಬೇಕು ಎಂಬ ಹೇಳಿಕೆ ಬೆನ್ನಲ್ಲೇ ಬಿಜೆಪಿ ಈ ಆಕ್ರೋಶವನ್ನು ಹೊರಹಾಕಿದೆ.
ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ರಾಹುಲ್ ಗಾಂಧಿ ಆಪ್ತ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಪಿತ್ರೋಡಾ, ಪಾಕಿಸ್ತಾನದಲ್ಲಿ ಮನೆಯಲ್ಲಿರುವಂತಹ ಅನುಭವವಾಗುತ್ತದೆ ಎಂದು ಹೇಳಿದ್ದಾರೆ. ಹೀಗಿದ್ದಾಗ ಮುಂಬೈ ದಾಳಿಯಂತಹ ಭೀಕರ ಘಟನೆಯ ಬಳಿಕವೂ ಯುಪಿಎ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇರುವುದರಲ್ಲಿ ಯಾವುದೇ ಆಶ್ಚರ್ಯ ಸಂಗತಿಯಿಲ್ಲ. ಪಿತ್ರೋಡಾ, ಪಾಕಿಸ್ತಾನದ ನೆಚ್ಚಿನ, ಕಾಂಗ್ರೆಸ್ ಆಯ್ಕೆ ಮಾಡಿದ ಅಧ್ಯಕ್ಷ ಎಂದು ಹೇಳಿದ್ದಾರೆ.
ಬಿಜೆಪಿಯ ಇನ್ನೊಬ್ಬ ವಕ್ತಾರ ಶೆಹಬಾಜ್ ಪೂನಾವಾಲಾ ಪ್ರತಿಕ್ರಿಯಿಸಿ, ಕಾಂಗ್ರೆಸ್‌ಗೆ ಪಾಕಿಸ್ತಾನದ ಮೇಲೆ ಅಪರಿಮಿತ ಪ್ರೀತಿ. ಯಾಸಿನ್ ಮಲ್ಲಿಕ್ ಮೂಲಕ ಹಫೀಜ್ ಸಯೀದ್ ಜತೆಗೂ ಮಾತನಾಡಿದ್ದಾರೆ. 26/11 ಮುಂಬೈ ದಾಳಿ ಕೃತ್ಯಕ್ಕೆ ಕ್ಲೀನ್ ಚಿಟ್ ಅನ್ನೂ ನೀಡಿದ್ದಾರೆ. ಜತೆಗೆ ಸಿಂಧೂ ನದಿ ಒಪ್ಪಂದ ಅಡಿಯಲ್ಲಿ ಶೇ 80ರಷ್ಟು ನೀರನ್ನೂ ನೀಡಿದ್ದಾರೆ. ಅವರು ಪಾಕಿಸ್ತಾನವನ್ನು ಪ್ರೀತಿಸುತ್ತಾರೆ. ಐಎನ್‌ಸಿ ಎಂದರೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಲ್ಲ ಇಸ್ಲಾಮಾಬಾದ್ ನ್ಯಾಷನಲ್ ಕಾಂಗ್ರೆಸ್ ಎಂದು ಕಿಡಿಕಾರಿದರು.