ಬಿಜೆಪಿ ಸಂಸದ ಪ್ರತಾಪ್ ಗೆ ಗಾಯ: ಎಲ್ಲಾ ನಾಟಕ ಎಂದ ಕೆಸಿ ವೇಣುಗೋಪಾಲ್

Krishnaveni K

ಗುರುವಾರ, 19 ಡಿಸೆಂಬರ್ 2024 (14:39 IST)
Photo Credit: X
ನವದೆಹಲಿ: ಸಂಸತ್ತಿನ ಹೊರಾವರಣದಲ್ಲಿ ಇಂದು ನಡೆದ ಗದ್ದಲದ ಬಗ್ಗೆ ಕೆಪಿಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಪ್ರತಿಕ್ರಿಯಿಸಿದ್ದು ಇದೆಲ್ಲಾ ಬಿಜೆಪಿಯವರ ಅಮಿತ್ ಶಾ ಬಚಾವೋ ಆಂದೋಲನದ ನಾಟಕ ಎಂದು ವ್ಯಂಗ್ಯವಾಡಿದ್ದಾರೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆಂದು ಪ್ರತಿಪಕ್ಷಗಳು ಸಂಸತ್ ನ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವಾಗ ಆಡಳಿತ ಮತ್ತು ವಿಪಕ್ಷ ಸಂಸದರ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗ್ ಬಿದ್ದು ಹಣೆಗೆ ಗಾಯವಾಗಿದೆ. ಇನ್ನೊಬ್ಬ ಬಿಜೆಪಿ ಸಂಸದ ಮುಕೇಶ್ ರಜಪೂತ್ ಗೂ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ತಮ್ಮನ್ನು ರಾಹುಲ್ ಗಾಂಧಿ ತಳ್ಳಿದ್ದರು ಎಂದು ಸಂಸದ ಪ್ರತಾಪ್ ಆರೋಪಿಸಿದ್ದಾರೆ.

ಈ ವಿಚಾರವೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಸಿ ವೇಣುಗೋಪಾಲ್ ಗಾಯವಾಗಿದ್ದು ಬಿಜೆಪಿಯ ನಾಟಕದ ಭಾಗ ಎಂದಿದ್ದಾರೆ. ಅಮಿತ್ ಶಾ ಹೇಳಿಕೆಯಿಂದಾದ ಡ್ಯಾಮೇಜ್ ಸರಿಪಡಿಸಲು ಬಿಜೆಪಿ ಈಗ ಗಾಯದ ನಾಟಕವಾಡುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಕಳೆದ 15 ದಿನಗಳಿಂದಲೂ ಪ್ರತಿಪಕ್ಷಗಳು ಸಂಸತ್ ಹೊರಾವರಣದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿವೆ. ಇಂದು ಮಾತ್ರ ಹೀಗೆ ಯಾಕೆ ಆಯಿತು? ಇದೆಲ್ಲಾ ಬಿಜೆಪಿಯ ನಾಟಕ ಎಂದಿದ್ದಾರೆ.

ಇನ್ನು, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸಿದೆ. ರಾಹುಲ್ ಗಾಂಧಿ ತಳ್ಳಾಟದಿಂದಲೇ ಬಿಜೆಪಿ ಸಂಸದರಿಗೆ ಗಾಯವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲೂ ಬಿಜೆಪಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಗಾಯಗೊಂಡಿದ್ದ ಬಿಜೆಪಿ ಸಂಸದರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಇತರೆ ನಾಯಕರು ಆರೋಗ್ಯ ವಿಚಾರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ