ಅಬ್ದುಲ್ ಕಲಾಂ ಸಮಾಧಿ ಬಳಿ ಭಗವದ್ಗೀತೆ ಪುಸ್ತಕ ವಿವಾದಕ್ಕೆ ಕಾರಣವಾಯ್ತು
ಸೋಮವಾರ, 31 ಜುಲೈ 2017 (10:29 IST)
ರಾಮೇಶ್ವರಂ: ದಿವಂಗತ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಬದುಕಿದ್ದಾಗ ಸರ್ವಧರ್ಮವೂ ಒಂದೇ ಎಂದು ಅಕ್ಷರಶಃ ಪಾಲಿಸಿದವರು. ಆದರೆ ಮೊನ್ನೆಯಷ್ಟೇ ಲೋಕಾರ್ಪಣೆಗೊಂಡ ಅವರ ಸಮಾಧಿ ಸ್ಮಾರಕದಲ್ಲಿ ಭಗವದ್ಗೀತೆ ಪುಸ್ತಕ ಇರಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಸ್ಮಾರಕದಲ್ಲಿರುವ ಕಲಾಂ ಮರದ ಪ್ರತಿಮೆಯ ಬಳಿ ಹಿಂದೂಗಳ ಪವಿತ್ರ ಧರ್ಮ ಗ್ರಂಥವಾದ ಭಗವದ್ಗೀತೆ ಇರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ವಿವಾದವನ್ನು ಬಗೆಹರಿಸಲು ಮುಂದಾಗಿರುವ ಕಲಾಂ ಕುಟುಂಬಸ್ಥರು ಅಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಗ್ರಂಥವಾದ ಖುರಾನ್ ಮತ್ತು ಬೈಬಲ್ ನ್ನೂ ಇಡಲು ಸಲಹೆ ನೀಡಿದೆ.
ಆದರೆ ಸ್ಮಾರಕದ ಬಳಿ ಖುರಾನ್ ಮತ್ತು ಬೈಬಲ್ ನ್ನು ಇಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಹಿಂದೂ ಸಂಘಟನೆ ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇಲ್ಲಿ ಭಗವದ್ಗೀತೆ ಹೊರತುಪಡಿಸಿ ಬೇರೆ ಗ್ರಂಥಗಳನ್ನು ಇಡಲು ಅನುಮತಿ ಇರಲಿಲ್ಲ ಎನ್ನುವುದು ಈ ನಾಯಕರ ವಾದ. ಆದರೆ ಕಲಾಂ ಎಲ್ಲಾ ಭಾರತೀಯರಿಗೂ ಸೇರಿದವರಾಗಿದ್ದರು. ಅವರು ಯಾವುದೇ ಧರ್ಮಕ್ಕೆ ಸೀಮಿತವಾದವರಲ್ಲ. ಈ ವಿಚಾರದಲ್ಲಿ ವಿವಾದ ಮಾಡಬೇಡಿ ಎಂದು ಕಲಾಂ ಕುಟುಂಬ ಮನವಿ ಮಾಡಿದೆ.