ಆತಿಶಿ ಗದ್ದುಗೆ ಏರಲು ಕ್ಷಣಗಣನೆ: ದೆಹಲಿಯ ಮೂರನೇ ಮಹಿಳಾ ಸಿಎಂ ಆಗಿ ಪ್ರಮಾಣವಚನ

Sampriya

ಶನಿವಾರ, 21 ಸೆಪ್ಟಂಬರ್ 2024 (14:03 IST)
Photo Courtesy X
ನವದೆಹಲಿ: ಅರವಿಂದ ಕೇಜ್ರಿವಾಲ್‌ ಅವರ ರಾಜೀನಾಮೆಯಿಂದ ತೆರವಾದ  ದೆಹಲಿಯ ನೂತನ ಮುಖ್ಯಮಂತ್ರಿ ಸ್ಥಾನದ ಗದ್ದುಗೆಗೆ ಆತಿಶಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಂಜೆ 4.30ಕ್ಕೆ ರಾಜ್ ನಿವಾಸದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತಿಶಿ ದೆಹಲಿಯ 3ನೇ ಮಹಿಳಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ವಿಶೇಷ. ಈ ಮೊದಲು ಬಿಜೆಪಿಯ ಸುಷ್ಮಾ ಸ್ವರಾಜ್ ಹಾಗೂ ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ದೆಹಲಿಯ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮುಖ್ಯಮಂತ್ರಿ ಗದ್ದುಗೆ ಏರಿದ ದೇಶದ 17ನೇ ಮಹಿಳೆ ಎಂಬ ಹೆಗ್ಗಳಿಕೆಗೆ ಆತಿಶಿ ಪಾತ್ರರಾಗಲಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇತರ ಐವರು ಎಎಪಿ ನಾಯಕರು ಅವರ ಸಂಪುಟದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ ಸಚಿವ ಸಂಪುಟದಲ್ಲಿ ಸುಲ್ತಾನಪುರ ಮಜ್ರಾ ಶಾಸಕ ಮುಕೇಶ್‌ ಅಹ್ಲಾವತ್‌, ಗೋಪಾಲ್‌ ರಾಯ್‌, ಕೈಲಾಶ್‌ ಗೆಹ್ಲೋತ್‌, ಸೌರಭ್‌ ಭಾರದ್ವಾಜ್‌ ಮತ್ತು ಇಮ್ರಾನ್‌ ಹುಸ್ಸೇನ್‌  ಸೇರಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರು, ಸೆಪ್ಟೆಂಬರ್ 13ರಂದು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದರು. ಬಳಿಕ ಅಚ್ಚರಿ ಎನ್ನುವಂತೆ ಸಿಎಂ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿ ರಾಜೀನಾಮೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ