ನವದೆಹಲಿ: ದೇಶದೆಲ್ಲೆಡೆ ಇಂದು 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಮಾತ್ರ ಇಂದು ಸ್ವಾತಂತ್ರ್ಯೋತ್ಸವ ಆಚರಣೆಯಿಲ್ಲ. ಯಾಕೆ ಗೊತ್ತಾ?
ದೆಹಲಿ ಅಬಕಾರಿ ಅಕ್ರಮ ಪ್ರಕರಣದಲ್ಲಿ ಕೇಜ್ರಿವಾಲ್ ಇದೀಗ ಬಂಧನದಲ್ಲಿದ್ದಾರೆ. ತಮ್ಮ ಬದಲು ಸಚಿವೆ ಅತಿಶಿಗೆ ಧ್ವಜಾರೋಹಣ ನೆರವೇರಿಸಲು ಕೇಜ್ರಿವಾಲ್ ಸೂಚಿಸಿದ್ದರು. ಆದರೆ ಕೇಜ್ರಿವಾಲ್ ರ ಆದೇಶಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ತಡೆ ನೀಡಿದ್ದು, ಸಿಎಂ ಬದಲು ಸಿಎಂ ಅಧಿಕೃತ ನಿವಾಸದಲ್ಲಿ ಬೇರೆ ಯಾರೂ ಧ್ವಜಾರೋಹಣ ಮಾಡಬಾರದು ಎಂದು ಆದೇಶ ನೀಡಿದ್ದಾರೆ.
ಸದ್ಯಕ್ಕಂತೂ ಕೇಜ್ರಿವಾಲ್ ಹೊರಬರುವ ಸಾಧ್ಯತೆಯಿಲ್ಲ. ಹೀಗಾಗಿ ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ದೆಹಲಿ ಸಿಎಂ ನಿವಾಸದಲ್ಲಿ ರಾಷ್ಟ್ರಧ್ವಜಾರೋಹಣವೇ ನಡೆದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ಪತ್ನಿ ಸುನೀತಾ ಇದೊಂದು ಬೇಸರದ ಸಂಗತಿ ಎಂದಿದ್ದಾರೆ.
ಆದರೆ ತಮ್ಮ ಎಕ್ಸ್ ಖಾತೆಯಲ್ಲಿ ವಾಗ್ದಾಳಿ ನಡೆಸಿರುವ ಅತಿಶಿ ಈ ದಿನ ಬ್ರಿಟಿಷರ ದಾಸ್ಯದಿಂದ ನಾವು ಸ್ವತಂತ್ರಾಗಿ ಸ್ವಾತಂತ್ರ್ಯ ಪಡೆದ ದಿನ. ಆದರೆ ಅಂದು ಸ್ವತಂತ್ರ ಭಾರತವಾದಾಗ ಯಾರೂ ಸ್ವತಂತ್ರ ಭಾರತದಲ್ಲಿ ಚುನಾಯಿತ ಮುಖ್ಯಮಂತ್ರಿಯೊಬ್ಬರನ್ನು ಸುಳ್ಳು ಕೇಸ್ ನಲ್ಲಿ ಬಂಧಿಸಿ ಜೈಲಿಗೆ ಹಾಕಬಹುದು ಎಂಬ ಕಲ್ಪನೆಯನ್ನೂ ಮಾಡಿರಲ್ಲ ಎಂದಿದ್ದಾರೆ.