ಮುಂಬೈಗೆ ಸಿಟಿ ರವಿ ಬುಲಾವ್: ಹೊಸ ಸರಕಾರ ರಚನೆ ಉಸ್ತುವಾರಿ?
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಹೈಕಮಾಂಡ್ ಮುಂಬೈಗೆ ಬರುವಂತೆ ಬುಲಾವ್ ನೀಡಿದೆ.
ಮಹಾರಾಷ್ಟ್ರ, ತಮಿಳುನಾಡು ಮತ್ತು ಗೋವಾ ರಾಜ್ಯಗಳ ಬಿಜೆಪಿ ಪಕ್ಷದ ಉಸ್ತುವಾರಿ ಆಗಿರುವ ಸಿಟಿ ರವಿ ಅವರನ್ನು ಕೂಡಲೇ ಮುಂಬೈಗೆ ಬರುವಂತೆ ಸೂಚಿಸಲಾಗಿದ್ದು, ನಾಳೆ ಹೊಸ ಸರಕಾರ ರಚನೆಯ ಉಸ್ತುವಾರಿ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದು, ಎರಡೂವರೆ ವರ್ಷದ ಮಹಾ ಆಘಾಡಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವ ಮುನ್ನವೇ ಪತನಗೊಂಡಿದೆ.
ಉದ್ಧವ್ ಠಾಕ್ರೆ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಶಿಂಧೆ ಬಣದೊಂದಿಗೆ ಮಹಾರಾಷ್ಟ್ರದಲ್ಲೂ ಕಮಲ ಅರಳುವುದು ಬಹುತೇಕ ಪಕ್ಕಾ ಆಗಿದೆ. ಠಾಕ್ರೆ ರಾಜೀನಾಮೆ ನೀಡುತ್ತಿದ್ದಂತೆ ಫಡ್ನವೀಸ್‍ಗೆ ಸಿಹಿ ತಿನ್ನಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.
ನಾಳೆ ರೆಬೆಲ್ಸ್ ಬೆಂಬಲಿತ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಹೈಕಮಾಂಡ್ ಮುಂಬೈಗೆ ಬರುವಂತೆ ಬುಲಾವ್ ನೀಡಿದೆ. ರವಿ ಮಹಾರಾಷ್ಟ್ರ, ಗೋವಾ, ತಮಿಳನಾಡಿನಲ್ಲಿ ಪಕ್ಷದ ಉಸ್ತುವಾರಿ ಆಗಿದ್ದಾರೆ.