ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ: ಕರ್ಫ್ಯೂ ಜಾರಿ

ಭಾನುವಾರ, 28 ಮೇ 2017 (10:17 IST)
ಶ್ರೀನಗರ:ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಬ್ಜಾರ್ ಭಟ್ ಹತ್ಯೆ ಖಂಡಿಸಿ ಕಾಶ್ಮೀರದಲ್ಲೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದೆ. ಈ ಹಿನ್ನಲೆಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
 
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿ ಹತ್ಯೆಯ ಬಳಿಕ ಸಬ್ಜಾರ್ ಭಟ್ ನನ್ನು ನೂತನ ಕಮಾಂದರ್ ನನ್ನಾಗಿ ಹಿಜ್ಬುಲ್ ನೇಮಕ ಮಾಡಿತ್ತು. ಆದರೆ ನಿನ್ನೆ ಭಾರತೀಯ ಸೇನಾಪಡೆ ನಡೆಸಿದ ಎನ್ ಕೌಂಟರ್ ನಲ್ಲಿ ಸಬ್ಜಾರ್ ಭಟ್ ನ ಹತ್ಯೆಗೈಯ್ಯಲಾಗಿತ್ತು. 
 
ಸಬ್ಜಾರ್ ಭಟ್ ಹತ್ಯೆ ಬೆನ್ನಲ್ಲೇ ಇದೀಗ ಕಾಶ್ಮೀರದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿದ್ದು, ಕಣಿವೆ ರಾಜ್ಯದಾದ್ಯಂತ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಆರಂಭವಾಗಿದೆ. ಘರ್ಷಣೆಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದು, ಐವರು ಪೊಲೀಸರು ಸೇರಿದಂತೆ ಒಟ್ಟು 35ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಉಗ್ರನ ಹತ್ಯೆ ವಿರೋಧಿಸಿ ಪ್ರತ್ಯೇಕತಾವಾದಿ ನಾಯಕರು ಎರಡು ದಿನಗಳ ಕಾಶ್ಮೀರ ಬಂದ್ ಗೆ ಕರೆ ನೀಡಿದ್ದಾರೆ. ಇದರಿಂದಾಗಿ ಕಾಶ್ಮೀರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಕರ್ಫ್ಯೂ ಜಾರಿಗೊಳಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ