ನವದೆಹಲಿ : ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರಿಗೆ ಸಂಬಂಧಪಟ್ಟ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ದಲೈ ಲಾಮಾ ಅಪ್ರಾಪ್ತ ಬಾಲಕನೊಬ್ಬನಿಗೆ ತಮ್ಮ ನಾಲಿಗೆಗೆ ಮುತ್ತಿಟ್ಟು ನೆಕ್ಕುವಂತೆ ಸೂಚಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವೀಡಿಯೋದಲ್ಲಿ ಬಾಲಕನೊಬ್ಬ ದಲೈ ಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ಬಳಿಕ ದಲೈ ಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸುತ್ತಾ ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ವೇಳೆ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡುಬಂದಿದೆ.
ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದ್ದೇ ತಡ. ಎಲ್ಲೆಡೆ ಬೌದ್ಧ ಧರ್ಮ ಗುರುವಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಪ್ರಾಪ್ತ ಬಾಲಕನೊಂದಿಗೆ ದಲೈ ಲಾಮಾ ವರ್ತಿಸಿರುವ ರೀತಿಯನ್ನು ನೆಟ್ಟಿಗರು ಅಸಹ್ಯಕರ ಎಂದು ಕರೆದಿದ್ದಾರೆ.