ಹೆಲ್ಮೆಟ್ ಧರಿಸಿ ಮದುವೆಮನೆಗೆ ಹೊರಟ ದಲಿತ ಮದುಮಗ

ಬುಧವಾರ, 13 ಮೇ 2015 (17:45 IST)
ಮದುವೆಯ ದಿನ ತಮ್ಮ ಕಡೆಯ ದಿಬ್ಬಣದೊಂದಿಗೆ ಮದುಮಗ ಕುದುರೆ ಏರಿ ಬರುವುದು ಉತ್ತರ ಭಾರತದಲ್ಲಿ ಸಾಮಾನ್ಯ. ಅದರಂತೆ ಮಧ್ಯಪ್ರದೇಶದ ನೆಗ್ರೂನ್‌ ಗ್ರಾಮದ ಆ ಯುವಕ ಕುದುರೆಯನ್ನೇರಿ ಕಲ್ಯಾಣ ಮಂಟಪದತ್ತ ಸಾಗಿದ್ದ. ಆದರೆ ವಿಚಿತ್ರವಾದ ಸಂಗತಿ ಎಂದರೆ ಆತ ಹೆಲ್ಮೆಟ್ ಕೂಡ ಧರಿಸಿದ್ದ. ಈತ ಹೀಗೆ ಮಾಡಲು ಕಾರಣ  ಮೇಲ್ವರ್ಗದ ಜನರ ಹಲ್ಲೆಯ ಭೀತಿ. 

ಇದು  ನಡೆದಿದ್ದು ಮಧ್ಯಪ್ರದೇಶದಲ್ಲಿ. ದಲಿತ ಸಮುದಾಯದ ಮದುಮಗನೊಬ್ಬ ಕುದುರೆ ಏರಿ ಮದುವೆಯಾಗಲು ಹೊರಟುದುದನ್ನು ಕಂಡು ಸಹಿಸದಾದ ಮೇಲ್ಜಾತಿಯ ಜನರು, ಆತನ ಮತ್ತು ದಿಬ್ಬಣದ ಮೇಲೆ ಸಹ ಕಲ್ಲೆಸೆದು ಅಮಾನುಷ, ನಿರ್ಲಜ್ಜ ವರ್ತನೆಯನ್ನು ತೋರಿದ್ದಾರೆ. ಅಲ್ಲದೇ ಆತ ಸವಾರಿ ಹೊರಟಿದ್ದ ಕುದುರೆಯನ್ನು ಸಹ ಎಳೆದೊಯ್ದಿದ್ದಾರೆ.
 
ಮೇ 10 ರ ರಾತ್ರಿ ನಡೆದ ಈ ಘಟನೆಯಲ್ಲಿ ಹೆಚ್ಚುವರಿ ತಹಶೀಲ್ದಾರ್‌ ಕೆ ಎಲ್‌ ಜೈನ್‌ ಸೇರಿದಂತೆ ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ತಾಲ್ ಪೊಲೀಸ್ ಠಾಣಾಧಿಕಾರಿ ಸುರೇಶ್ ಬಾಲರಾಜ್ ತಿಳಿಸಿದ್ದಾರೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ 72 ಜನರ ಮೇಲೆ ದೂರು ದಾಖಲಾಗಿದೆ. 
 
ಮೇಲ್ವರ್ಗದ ಜನರ ಹಲ್ಲೆಯ ಅನುಮಾನ ಮೊದಲೇ ಇದ್ದುದರಿಂದ ವಧುವಿನ ತಂದೆ  ಮೊದಲೇ ಪೊಲೀಸರು ಸಹಾಯವನ್ನು ಕೋರಿದ್ದ . ಆದರು ಕೂಡ ದಿಬ್ಬಣದ ಮೇಲೆ ಹಲ್ಲೆ ನಡೆದಿದೆ. 
 
ಕುದುರೆಯನ್ನು ಸಹ ಎಳೆದೊಯ್ದಿದ್ದರಿಂದ ಮತ್ತೊಂದು ಕುದುರೆಯನ್ನು ತರಸಲಾಯಿತು. ದುರುಳ ಜನರು ಮತ್ತೆ ದಾಳಿಯನ್ನು  ಮುಂದುವರೆಸಿದರು. ಹೀಗಾಗಿ ಪೊಲೀಸರು ಮದುಮಗನಿಗೆ ಹೆಲ್ಮೆಟ್‌ನ್ನು ತಂದುಕೊಟ್ಟು ಸವಾರಿಯನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟರು. 

ವೆಬ್ದುನಿಯಾವನ್ನು ಓದಿ