ಹೈಕೋರ್ಟ್ ತೀರ್ಪು ಕೇಜ್ರಿವಾಲ್‌ಗೆ ಕಪಾಳಮೋಕ್ಷ: ಬಿಜೆಪಿ

ಶುಕ್ರವಾರ, 5 ಆಗಸ್ಟ್ 2016 (17:08 IST)
ಆಮ್ ಆದ್ಮಿ ಸರ್ಕಾರದ ಅರ್ಜಿಯನ್ನು ವಜಾ ಮಾಡಿ, ಉಪ ರಾಜ್ಯಪಾಲರನ್ನು ಆಡಳಿತಾತ್ಮಕ ಮುಖ್ಯಸ್ಥ ಎಂಬುದನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ತೀರ್ಪು  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್     ಅವರಿಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಬಿಜೆಪಿ ಅಣಕವಾಡಿದೆ.

ಅಧಿಕಾರಕ್ಕೆ ಬಂದಾಗಿನಿಂದ ಕೇಜ್ರಿವಾಲ್ ತಮ್ಮ ವಿಫಲತೆಗೆ ಕೇಂದ್ರ ಮತ್ತು ಪ್ರಧಾನಿ ಮೋದಿಯನ್ನು ದೂಷಿಸುತ್ತಾರೆ. ನಿನ್ನೆ ಕೋರ್ಟ್ ನೀಡಿದ ತೀರ್ಪು ಕೇಜ್ರಿವಾಲ್ ಅವರಿಗೆ ದೊರೆತ ಬಲವಾದ ಕಪಾಳ ಮೋಕ್ಷ. ನಾಚಿಕೆ ಎನ್ನುವುದಿದ್ದರೆ ಅವರಿದರಿಂದ ಪಾಠ ಕಲಿತು ದೆಹಲಿ ಜನರಿಗೆ ಮಾಡಿರುವ ವಾಗ್ದಾನಗಳನ್ನು ಪೂರೈಸಲು ಕಾರ್ಯ ನಿರ್ವಹಿಸಬೇಕು ಎಂದು ಬಿಜೆಪಿ ನಾಯಕ ಶ್ರೀಕಾಂತ ಶರ್ಮಾ ಹೇಳಿದ್ದಾರೆ.

ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಲೆಫ್ಟಿನೆಂಟ್ ಗವರ್ನರ್ (ಎಲ್​ಜಿ) ಅವರ ಅಧಿಕಾರಗಳನ್ನು ಪ್ರಶ್ನಿಸಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾ ಮಾಡಿದ್ದು, ‘ಲೆಫ್ಟಿನೆಂಟ್ ಗವರ್ನರ್ ರಾಜ್ಯ ಸಚಿವ ಸಂಪುಟದ ಸೂಚನೆಯಂತೆ ಕಾರ್ಯ ನಿರ್ವಹಿಸಬೇಕು ಎನ್ನುವುದು ಒಪ್ಪತಕ್ಕದ್ದಲ್ಲ ಎಂದು ಹೇಳಿದೆ.

ಕೇಂದ್ರ ಸರ್ಕಾರದ ಪರವಾಗಿ ತೀರ್ಪು ನೀಡಿರುವ ಹೈಕೋರ್ಟ್, ದೆಹಲಿಯ ಪೊಲೀಸ್, ಕಾನೂನು ಸುವ್ಯವಸ್ಥೆ ಕೇಂದ್ರದ ಅಡಿಯೇ ಉಳಿಯುತ್ತದೆ ಎಂದಿದೆ.

ಉಪರಾಜ್ಯಪಾಲರು ನಮ್ಮ ಸರ್ಕಾರದ ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸಬೇಕು ಎಂಬ ಆಪ್ ಸರ್ಕಾರದ ಪ್ರತಿಪಾದನೆಯು ಯಾವುದೇ ಆಧಾರವಿಲ್ಲದ್ದು. ಅದನ್ನು ಒಪ್ಪಲಾಗುವುದಿಲ್ಲ. ಉಪರಾಜ್ಯಪಾಲರೇ ರಾಷ್ಟ್ರ ರಾಜಧಾನಿ ಪ್ರದೇಶದ ಆಡಳಿತಾತ್ಮಕ ಮುಖ್ಯಸ್ಥ’ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಸಂವಿಧಾನದ 239ನೇ ವಿಧಿಯ ಪ್ರಕಾರ ದೆಹಲಿ ಕೇಂದಾಡಳಿತ ಪ್ರದೇಶವಾಗಿಯೇ ಉಳಿಯಲಿದೆ ಎಂದಿರುವ ಕೋರ್ಟ್ ಉಪರಾಜ್ಯಪಾಲರಿಗೆ ಮಾಹಿತಿ ನೀಡದೇ ಸಚಿವ ಸಂಪುಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದೆ.

ವೆಬ್ದುನಿಯಾವನ್ನು ಓದಿ