ನವದೆಹಲಿ: ಅಬಕಾರಿ ಅಕ್ರಮ ಹಗರಣದಲ್ಲಿ ಜೈಲು ಪಾಲಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ನಿನ್ನೆ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಅದನ್ನು ಈಗ ಹೈಕೋರ್ಟ್ ತಾತ್ಕಾಲಿಕವಾಗಿ ತಡೆಹಿಡಿದಿದೆ.
ಅಬಕಾರಿ ಅಕ್ರಮಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ. ಲಂಚ ಪಡೆದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಅರವಿಂದ್ ಕೇಜ್ರಿವಾಲ್ ರನ್ನುಮಾರ್ಚ್ 21 ರಂದು ಬಂಧಿಸಿತ್ತು. ಬಂಧನದ ಹೊರತಾಗಿಯೂ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿರಲಿಲ್ಲ. ಬಳಿಕ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೆಲವು ದಿನ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ ಮತ್ತೆ ಜೂನ್ 2 ರಂದು ಶರಣಾಗಲು ಸೂಚಿಸಲಾಗಿತ್ತು.
ಅದರಂತೆ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಆದರೆ ನಿನ್ನೆ ಸ್ಥಳೀಯ ನ್ಯಾಯಾಲಯ ಕೇಜ್ರಿವಾಲ್ ಗೆ ಜಾಮೀನು ನೀಡಿತ್ತು. ಸ್ಥಳೀಯ ನ್ಯಾಯಾಲಯದಿಂದ ಜಾಮೀನು ಸಿಕ್ಕ ಹಿನ್ನಲೆಯಲ್ಲಿ ಇಂದು ಬಿಡುಗಡೆಯಾಗುವ ಖುಷಿಯಲ್ಲಿದ್ದ ಕೇಜ್ರಿವಾಲ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿ ಶಾಕ್ ಕೊಟ್ಟಿದೆ.
ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣವನ್ನು ಹೈಕೋರ್ಟ್ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿತ್ತು. ಅದರಂತೆ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಸದ್ಯಕ್ಕೆ ಜಾಮೀನಿಗೆ ತಡೆ ನೀಡಿದೆ. ಹೀಗಾಗಿ ಕೇಜ್ರಿವಾಲ್ ಜೈಲಿನಲ್ಲೇ ಕಾಲ ಕಳೆಯಬೇಕಿದೆ.