ನವಸಾರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ದಿವ್ಯಾಂಗರಿಗೆ ಕಿಟ್ ನೀಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ದೃಷ್ಟಿ ದೋಷವಿದ್ದ ಪುಟ್ಟ ಮಗು ಗೌರಿ ಶಾರ್ದೂಲ್‌ಳನ್ನು ಎತ್ತಿಕೊಂಡ ಪ್ರಧಾನಿ ಆಕೆಯನ್ನು ವಾತ್ಸಲ್ಯದಿಂದ ಮಾತನಾಡಿಸಿ ರಾಮಾಯಣವನ್ನು ಹೇಳುವಂತೆ, 'ಬೋಲೋ ಬೇಟಾ ಬೋಲ್'( ಹೇಳು ಕಂದ ಹೇಳು) ಎಂದು ಹುರಿದುಂಬಿಸಿದರು.
ಧ್ವನಿವರ್ಧಕದ ಮುಂದೆ ಮೋದಿ ಅವರ ಮಡಿಲಲ್ಲಿ ನಿಂತಿದ್ದ ಮಗು,'ನನ್ನ ಹೆಸರು ಗೌರಿ, ನಾನು ಪೂಜಾ ಮತ್ತು ಯೋಗಿ ರಾಜ್ ಎಂಬುವವರ ಮಗಳಾಗಿದ್ದು ಒಂದನೆಯ ತರಗತಿಯಲ್ಲಿ ಓದುತ್ತಿದ್ದೇನೆ ಎಂದು ಹೇಳಿದಳು. ಬಳಿಕ ಪ್ರಧಾನಿ ಅವರ ಮಾತಿಗೆ ಒಪ್ಪಿ ರಾಮಾಯಣವನ್ನು ಸಹ ಪಟಪಟನೆ ಹೇಳಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದಳು.
'ದಿವ್ಯಾಂಗರನ್ನು ಅನುಕಂಪದಿಂದ ನೋಡಬೇಡಿ. ಅವರಿಗೂ ಆತ್ಮಗೌರವವಿದೆ, ಅವರು ಸಮಾನತೆಗೆ ಹಕ್ಕುದಾರರು', ಎಂದ ಪ್ರಧಾನಿ 'ಹೆಣ್ಣುಮಕ್ಕಳ ವಿಷಯದಲ್ಲೂ ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಿ', ಎಂದರು. ಜತೆಗೆ ಸಂಕೇತ ಭಾಷೆಯಲ್ಲಿ ಸಾರ್ವತ್ರಿಕ ಪಠ್ಯಕ್ರಮವನ್ನು ಸಹ ಅವರು ಘೋಷಿಸಿದರು.
ಶನಿವಾರ ನಡೆದ ಕಾರ್ಯಕ್ರಮದಲ್ಲಿ 11,232 ದಿವ್ಯಾಂಗರಿಗೆ ಗಾಲಿಕುರ್ಚಿ, ಟ್ರೈ- ಸೈಕಲ್ಸ್, ಸ್ಮಾರ್ಟ್ ಸ್ಟಿಕ್ಸ್, ಸ್ಮಾರ್ಟ್ ಫೋನ್, ಬುದ್ಧಿಮಾಂದ್ಯರಿಗೆ ವಿಶೇಷ ಸಾಫ್ಟವೇರ್‌ಗಳುಳ್ಳ ಲ್ಯಾಪ್‌ಟಾಪ್, ಬ್ರೈಲ್ ಲಿಪಿಗಳು, ಕ್ಯಾಲಿಪರ್ಸ್ ಏಡ್ ಮತ್ತು ಇತರೇ ಉಪಕರಣಗಳನ್ನು ನೀಡಲಾಯಿತು. ಈ ಮೂಲಕ 3 ವಿಶ್ವ ದಾಖಲೆಗಳನ್ನು ದಾಖಲಿಸಲಾಗಿದೆ.