ಶಶಿಕಲಾ, ದಿನಕರನ್`ಗೆ ಪನ್ನೀರ್-ಪಳನಿ ಶಾಕ್

ಮಂಗಳವಾರ, 18 ಏಪ್ರಿಲ್ 2017 (11:34 IST)
ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷದ ಎರಡು ಎಲೆ ಚಿಹ್ನೆ ಉಳಿಸಿಕೊಳ್ಳಲು ಅಣ್ಣಾಡಿಎಂಕೆಯ ಪನ್ನೀರ್ ಸೆಲ್ವಂ ಮತ್ತು ಸಿಎಂ ಪಳನಿಸ್ವಾಮಿ ಬಣ ಒಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಧ್ಯಾಹ್ನ ಎರಡೂ ಬಣಗಳ ಶಾಸಕರ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಕ್ಷದ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ವಿರುದ್ಧ ಪಕ್ಷದಲ್ಲಿ ಸುಪ್ತವಾಗಿದ್ದ ಆಕ್ರೋಶ ಈಗ ಭುಗಿಲೆದ್ದಿದೆ. ಕಳೆದ ರಾತ್ರಿಯೇ 25 ಸಚಿವರು ಮತ್ತು ಶಾಸಕರನ್ನೊಳಗೊಂಡ ಸಭೆ ನಡೆದಿದ್ದು, ಎರಡೂ ಬಣಗಳು ಒಟ್ಟಾಗಿ ಹೋಗುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಆದರೆ, ಪನ್ನೀರ್ ಸೆಲ್ವಂ ಬಣದ ವಿಲೀನಕ್ಕೆ ಶಶಿಕಲಾ ಮತ್ತು ದಿನಕರನ್ ವಿರೋಧಿಸುವ ಸಾಧ್ಯತೆ ಇದ್ದು, ಅವರನ್ನೇ ಪಕ್ಷದಿಂದ ಉಚ್ಚಾಟಿಸಲಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ. ಪನ್ನೀರ್ ಸೆಲ್ವಂ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ವಾಪಸ್ ಕರೆ ತರುವ ಯತ್ನ ನಡೆದಿದೆ ಎನ್ನಲಾಗಿದೆ.

ಉಪಚುನಾವಣೆಯ ಭ್ರಷ್ಟಾಚಾರ ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೇ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಟಿಟಿವಿ ದಿನಕರನ್`ನಿಂದಾಗಿ ಪಕ್ಷದ ಇಮೇಜ್`ಗೆ ಧಕ್ಕೆಯಾಗಿದೆ. ಹೀಗಾಗಿ, ಅವರನ್ನ ಹೊರಹಾಕಿ, ಪನ್ನೀರ್ ಸೆಲ್ವಂ ಬಣವನ್ನ ವಾಪಸ್ ಕರೆ ತಂದು ಎರಡು ಎಲೆ ಚಿಹ್ನೆ ವಾಪಸ್ ಪಡೆಯುವುದು ಮುಖಂಡರ ಉದ್ದೇಶವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ