ಈ ಮಹಿಳೆ ಕಣ್ಣಲ್ಲಿ ಇತ್ತು ಬರೋಬ್ಬರಿ 27 ಕಾಂಟೆಕ್ಟ್ ಲೆನ್ಸ್ ಗಳು..!

ಸೋಮವಾರ, 17 ಜುಲೈ 2017 (11:55 IST)
ಲಂಡನ್: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಬಂದ 67 ವರ್ಷದ ಮಹಿಳೆಯ ಕಣ್ಣಿನಲ್ಲಿ ಬರೋಬ್ಬರಿ 27 ಕಾಂಟ್ಯಾಕ್ಟ್ ಲೆನ್ಸ್ ಪತ್ತೆಯಾಗಿದ್ದು, ಇದನ್ನು ಕಂಡ ವದ್ಯರುಗಳೇ ದಂಗಾಗಿ ಹೋಗಿದ್ದಾರೆ. ಬರ್ಮಿಂಗ್ ಹ್ಯಾಮ್ ಆಸ್ಪತ್ರೆಯಲ್ಲಿ ಕಣ್ಣುರಿ ಎಂಬ ಕಾರಣಕ್ಕೆ ಚಿಕಿತ್ಸೆಗೆ ಎಂದು ಆಗಮಿಸಿದ್ದ ಮಹಿಳೆ ಕಣ್ಣನ್ನು ತಪಾಸಣೆ ಮಾಡಿದ ಭಾರತೀಯ ಮೂಲದ ವೈದ್ಯೆ ಡಾ.ರೂಪಲ್ ಮರ್ಜಾರಿಯಾ ಅವರಿಗೆ ದೊಡ್ಡ ಅಚ್ಚರಿ ಕಾದಿತ್ತು.
 
67ರ ಮಹಿಳೆಯ ಕಣ್ಣಿನಲ್ಲಿ ಒಂದಲ್ಲ ಎರಡಲ್ಲ 27 ಕಾಂಟ್ಯಾಕ್ಟ್ ಲೆನ್ಸ್ ಗಳು ಕಂಡುಬಂದಿವೆ. ಮಹಿಳೆ ಕಣ್ಣಲ್ಲಿ ಮೊದಲಿಗೆ 17 ಲೆನ್ಸ್ ಗಳು ಕಾಣಿಸಿವೆ. ಬಳಿಕ ತೀವ್ರ ತಪಾಸಣೆ ನಡೆಸಿದಾಗ ಮತ್ತೆ 10 ಲೆನ್ಸ್ ಗಳು ಪತ್ತೆಯಾಗಿವೆ. ಇದು ವೈದ್ಯಲೋಕದಲ್ಲೇ ಅಚ್ಚರಿಯಾಗಿದ್ದು, ಇದುವರೆಗೆ ಇಂಥೊಂದು ಘಟನೆ ನೋಡಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
 
ಮಹಿಳೆ ಕಳೆದ 35 ವರ್ಷಗಳಿಂದ ತಿಂಗಳಿಗೊಮ್ಮೆ ಬದಲಾಯಿಸುವ ಲೆನ್ಸ್ ಬಳಸುತ್ತಿದ್ದರು. ಇತ್ತೀಚೆಗೆ ಕಣ್ಣಲ್ಲಿ ಕಿರಿ ಉಂಟಾಗಿ ಕಣ್ಣುರಿ ಆರಂಭವಾಗಿದೆ. ಬಹುಶ: ವಯಸಿನ ಸಮಸ್ಯೆಯಿರಬೇಕು ಎಂದು ಕ್ಯಾಟರಾಕ್ಟ್ ಸರ್ಜರಿ ಮಾಡಿಸಲು ಮಹಿಳೆ ಆಸ್ಪತ್ರೆಗೆ ಬಂದಿದ್ದಾರೆ.  ಮಹಿಳೆ ಪ್ರತಿ ತಿಂಗಳೂ ಲೆನ್ಸ್ ಬದಲಿಸುತ್ತಿದ್ದರೂ ಕೆಲವು ಲೆನ್ಸ್ ಗಳು ಅಲ್ಲೇ ಉಳಿದು ಗುಡ್ಡೆಯಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. 
 
ಇನ್ನೊಂದು ವಿಶೇಷವೆಂದರೆ ಮಹಿಳೆಯ ಕಣ್ಣಿನಲ್ಲಿನ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ತೆಗೆದು ಎರಡುವಾರಗಳಾಗಿವೆ. ಈಗ ದೃಷ್ಟಿ ಮೊದಲಿಗಿಂತ ಇನ್ನೂ ಚೆನ್ನಾಗಿ ಕಾಣುತ್ತಿದೆಯಂತೆ. 
 

ವೆಬ್ದುನಿಯಾವನ್ನು ಓದಿ