ಬಂದ್‌ಗೆ ಅವಕಾಶ ನೀಡಬೇಡಿ: ಕರ್ನಾಟಕ, ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಎಚ್ಚರಿಕೆ

ಶುಕ್ರವಾರ, 16 ಸೆಪ್ಟಂಬರ್ 2016 (12:24 IST)
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಗಲಭೆ, ಸಂಘರ್ಷಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಎರಡು ಸರ್ಕಾರಗಳಿಗೆ ಇದಕ್ಕೆಲ್ಲ ಅವಕಾಶ ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ.

 
ತನ್ನ ಆದೇಶವನ್ನು ವಿರೋಧಿಸಿ ಬಂದ್, ಆಂದೋಲನಗಳನ್ನು ನಡೆಸುವುದು ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. 
 
“ತನ್ನ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಬಂದ್, ಪ್ರತಿಭಟನೆ ನಡೆಯಬಾರದು. ಒಮ್ಮೆ ಆದೇಶವನ್ನು ರವಾನಿಸಲಾಗಿದೆ. ಅನ್ಯಾಯಕ್ಕೊಳಗಾದವರು ಮೇಲ್ಮನವಿ ಸಲ್ಲಿಸಬಹುದು ", ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಯು.ಯು ಲಲಿತ್ ಪೀಠ ಹೇಳಿದೆ.
 
ಎರಡು ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಂದ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ಇದನ್ನು ತಡೆಯಲು ತತ್‌ಕ್ಷಣ ಕ್ರಮಗಳನ್ನು ಕೈಗೊಳ್ಳುವಂತೆ ಎರಡು ರಾಜ್ಯಗಳಿಗೆ ನಿರ್ದೇಶನ ನೀಡಿ ಎಂದು ಕನ್ಯಾಕುಮಾರಿ ನಿವಾಸಿಯೊಬ್ಬರು ಸುಪ್ರೀಂಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. " ಕರ್ನಾಟಕ ಮತ್ತು ತಮಿಳುನಾಡು ಕ್ರಮ ತೆಗೆದುಕೊಳ್ಳಲು ಜವಾಬ್ದಾರರಾಗಿದ್ದಾರೆ ಮತ್ತು ಜನರು ತಮ್ಮ ಕೈಗೆ ಕಾನೂನು ತೆಗೆದುಕೊಳ್ಳಲು ಸಾಧ್ಯವಿಲ್ಲ ", ಎಂದು ಸುಪ್ರೀಂ ಹೇಳಿದೆ. 
 
ಮುಂದಿನ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 20ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ