ಅಕ್ಕಿ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡೋದು ಬೇಡ : ಸಿದ್ದರಾಮಯ್ಯ

ಗುರುವಾರ, 22 ಜೂನ್ 2023 (11:45 IST)
ನವದೆಹಲಿ : ಭಾರತೀಯ ಆಹಾರ ನಿಗಮ ಕರ್ನಾಟಕಕ್ಕೆ ಮೊದಲು ಅಕ್ಕಿ ಕೊಡುವ ಭರವಸೆ ನೀಡಿತ್ತು, ಆದರೆ ಇದ್ದಕ್ಕಿದ್ದ ಹಾಗೇ ಅಕ್ಕಿ ನೀಡಲು ನಿರಾಕರಿಸಲಾಗುತ್ತಿದೆ. ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡಿದ್ದಾರೆ ಅನಿಸುತ್ತೆ, ಈ ರೀತಿಯ ದ್ವೇಷದ ರಾಜಕೀಯ ಮಾಡೋದು ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ದೆಹಲಿಯಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇನೆ, ಸೌಹಾರ್ದಯುತವಾಗಿ ಚರ್ಚೆ ಮಾಡಿದೆ. ರಾಜ್ಯಕ್ಕೆ ಅಕ್ಕಿ ನೀಡುವ ವಿಚಾರವಾಗಿ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಆಗಿರುವ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತಂದಿದ್ದೀನಿ ಎಂದು ಹೇಳಿದ್ದಾರೆ. 

ಮೊದಲು FCI ಅಕ್ಕಿ ನೀಡುವ ಭರವಸೆ ನೀಡಲಾಗಿತ್ತು. ಆದರೆ ಕಡೆ ಕ್ಷಣದಲ್ಲಿ ನಿರ್ಧಾರ ಬದಲಿಸಿ ಈಗ ಅಕ್ಕಿ ನೀಡಲು ನಿರಾಕರಿಸುತ್ತಿದೆ. ಈ ರೀತಿ ಮಾಡುವುದು ಸರಿಯಲ್ಲ, ಇದು ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡಿದ ಹಾಗೇ ಆಗಲಿದೆ. ಈ ಹಿನ್ನೆಲೆಯಲ್ಲಿ ಅಕ್ಕಿ ನೀಡುವಂತೆ ಸೂಚಿಸಲು ನವಿ ಮಾಡಿದ್ದೇನೆ. ಅದಕ್ಕೆ ಅವರು ಪೂರಕವಾಗಿ ಸ್ಪಂಧಿಸಿದ್ದು, ಕೇಂದ್ರ ಆಹಾರ ಸಚಿವ ಪಿಯೂಷ್ ಗೊಯೇಲ್ ಜೊತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಈಗಾಗಲೇ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಕ್ಕಿ ಹೊಂದಿಸಲು ಬೇರೆ ಬೇರೆ ರಾಜ್ಯಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಯಾವ ರಾಜ್ಯಗಳಲ್ಲೂ ಬೇಡಿಕೆ ಇರುವಷ್ಟು ಸಾಮರ್ಥ್ಯದಲ್ಲಿ ಪೂರೈಕೆಯಾಗದ ಹಿನ್ನೆಲೆ ಯೋಜನೆ ಜಾರಿ ಮಾಡುವುದು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ