ರೆಡ್ಡಿ ಮಗಳ ಮದುವೆಗೆ ಹೋಗ್ಬೇಡಿ ಎಂದ ಬಿಜೆಪಿ ಹೈಕಮಾಂಡ್?

ಮಂಗಳವಾರ, 15 ನವೆಂಬರ್ 2016 (09:23 IST)
ಬೆಂಗಳೂರು:ನಗರದ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿರುವ ಬಿಜೆಪಿ ಮುಖಂಡ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ವಿವಾಹದಲ್ಲಿ ಪಾಲ್ಗೊಳ್ಳದಂತೆ ಬಿಜೆಪಿ ಮುಖಂಡರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.

 
ಈಗಾಗಲೇ ಪ್ರಧಾನಿ ಮೋದಿ ಕಪ್ಪುಹಣ ನಿಗ್ರಹಕ್ಕೆ ಐದುನೂರು ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿದ್ದಾರೆ. ಕಪ್ಪುಹಣ ಹೊಂದಿರುವವರ ವಿರುದ್ಧ ಬಿಜೆಪಿ ಹೋರಾಟ ನಿರಂತರವಾಗಿರುತ್ತದೆ ಎಂದಿದ್ದಾರೆ. ಇವುಗಳ ನಡುವೆಯೇ ಕಾಂಗ್ರೆಸ್ ರೆಡ್ಡಿ ಕಪ್ಪು ಹಣದಿಂದ ಮಗಳ ಮದುವೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅಷ್ಟೊಂದು ಅದ್ದೂರಿ ಮದುವೆ ಕೆಲವು ಸಂಶಯಕ್ಕೂ ಕಾರಣವಾಗಿದೆ. ಹೀಗಿದ್ದಾಗ ಬಿಜೆಪಿ ಮುಖಂಡರು ಮದುವೆಗೆ ಹೋದರೆ ಅದು ಮೋದಿಗೆ ಮಾಡಿರುವ ಅವಮಾನ ಹಾಗೂ ಕಪ್ಪುಹಣದ ವಿರುದ್ಧ ಹೋರಾಡುವ ಬಿಜೆಪಿಗೆ ನಾಚಿಕೆಗೇಡಿನ ವಿಷಯ ಎಂದು ಹೈಕಮಾಂಡ್ ಬಿಜೆಪಿ ಮುಖಂಡರಿಗೆ ಸೂಚನೆ ನೀಡಿದೆ ಎನ್ನಲಾಗಿದೆ.
 
ಈ ಆರೋಪ, ಪ್ರತ್ಯಾರೋಪಗಳ ನಡುವೆಯೇ ಇಂದು ಮತ್ತು ನಾಳೆ ಅರಮನೆ ಮೈದಾನದಲ್ಲಿ ರೆಡ್ಡಿ ಪುತ್ರಿ ಬ್ರಹ್ಮಿಣಿ ಮದುವೆ ವೈಭವದಿಂದ ನಡೆಯಲಿದೆ. ರಾಜಮನೆತದ ಮದುವೆಯಂತೆ ವಿಜ್ರಂಭಣೆಯಿಂದ ಎರಡು ದಿನ ನಡೆಯಲಿದೆ. ಅದ್ಧೂರಿ ಸೆಟ್ ಹಾಕಲಾಗಿದ್ದು ಮಿನಿ ಬಳ್ಳಾರಿಯನ್ನೇ ನಿರ್ಮಿಸಲಾಗಿದೆ. ಹಳ್ಳಿ ಜೀವನ, ಪರಂಪರೆ ಬಿಂಬಿಸುವ ಮನೆ, ಕಟ್ಟೆ, ಮರ, ಗಿಡ ಹೀಗೆ ಎಲ್ಲವನ್ನೂ ನೈಜ ಎನ್ನುವಂತೆ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ