ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಇದೀಗ ತಮ್ಮ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಪೈಪೋಟಿ ನೀಡಲು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಡಾ ಸಿಎನ್ ಮಂಜುನಾಥ್ ಅವರಂತಹ ಕಳಂಕರಹಿತ, ಜನಪ್ರಿಯ ವ್ಯಕ್ತಿಯನ್ನು ಕಣಕ್ಕಿಳಿಸಿದೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಅಳಿಯ ಎಂಬ ಕಾರಣಕ್ಕೆ ಡಾ ಸಿಎನ್ ಮಂಜುನಾಥ್ ಸ್ಪರ್ಧೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯ ಮಾಡಿತ್ತು. ಇದು ಕುಟುಂಬ ರಾಜಕಾರಣ ಎಂದು ಆರೋಪಿಸಿತ್ತು. ಇದಕ್ಕೀಗ ತಿರುಗೇಟು ನೀಡಿರುವ ಮಂಜುನಾಥ್ ಕುಟುಂಬ ರಾಜಕಾರಣ ಎನ್ನುವ ಆರೋಪ ಈಗ ರಾಜ್ಯ, ದೇಶ ರಾಜಕಾರಣದಲ್ಲಿ ಅಪ್ರಸ್ತುತ. ಯಾಕೆಂದರೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಮಗ-ಸೊಸೆ, ಅಳಿಯ-ಮಗಳು, ಅಣ್ಣ ಎಲ್ಲರೂ ಇದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದಾಗ ನಾನು ಯಾರ ವಿರುದ್ಧವೂ ಟೀಕೆ ಮಾಡಲ್ಲ ಎಂದಿದ್ದರು. ಆದರೆ ಈಗ ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ತಿರುಗೇಟು ನೀಡಲು ಡಾ ಮಂಜುನಾಥ್ ಹಿಂದೆ ಮುಂದೆ ನೋಡಿಲ್ಲ. ಅಲ್ಲದೆ, ಇದು ಧರ್ಮ-ಅಧರ್ಮದ ನಡುವಿನ ಚುನಾವಣೆ ಎಂಬ ಕಾಂಗ್ರೆಸ್ ವ್ಯಾಖ್ಯಾನದ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದಿದ್ದಾರೆ. ಚುನಾವಣೆ ಆರೋಗ್ಯಕರವಾಗಿರಬೇಕು ಎಂದಿದ್ದಾರೆ.