ಪಾಟ್ನಾ : ಶಾಲೆಯಲ್ಲಿ ಮಧ್ಯಾಹ್ನ ವೇಳೆ ನೀಡಲಾಗಿದ್ದ ಉಪಹಾರ ಸೇವಿಸಿ 20 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬಿಹಾರದ ಮಾಧೇಪುರ ಜಿಲ್ಲೆಯ ಕಾಶಿಪುರದಲ್ಲಿ ಬೆಳಕಿಗೆ ಬಂದಿದೆ.
ಮಕ್ಕಳು ಸೇವಿಸಿದ ಆಹಾರ ಕಲುಷಿತಗೊಂಡಿದ್ದರಿಂದ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುತೇಕ ಮಕ್ಕಳು ಸಹಜ ಸ್ಥಿತಿಗೆ ಮರಳಿದ್ದು, ಇಬ್ಬರು ಮಕ್ಕಳಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರಾದ ಡಾ.ಮುಖೇಶ್ಕುಮಾರ್ ತಿಳಿಸಿದ್ದಾರೆ.
ಘಟನೆ ಸಂಬಂಧ ಶಾಲಾ ಶಿಕ್ಷಕಿ ಬಬಿತಾ ಕುಮಾರಿ ಅವರಿಂದ ಮಾಹಿತಿ ಪಡೆದ ಬ್ಲಾಕ್ ಶಿಕ್ಷಣಾಧಿಕಾರಿ ಗುಣಾನಂದ್ಸಿಂಗ್, ಮಕ್ಕಳಿಗೆ ಮಧ್ಯಾಹ್ನ ನೀಡಲಾದ ಆಹಾರವು ಹಳಸಾಗಿತ್ತು ಎಂದು ತಿಳಿದು ಬಂದಿದೆ.
ಈ ಕುರಿತು ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗುವುದು. ಅಲ್ಲದೆ, ಇನ್ನು ಮುಂದೆ ಅಂತಹ ಗುಣಮಟ್ಟದ ಆಹಾರ ನೀಡದಂತೆ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.