ಅಮರಾವತಿ : ಲೈಂಗಿಕ ದೌರ್ಜನ್ಯದ ಅಪರಾಧ ಸಾಬೀತುಪಡಿಸಲು ವೀರ್ಯ ಸ್ಖಲನ ಆಗಿರಲೇಬೇಕಾದ ಅಗತ್ಯ ಇಲ್ಲ ಎಂದು ಆಂಧ್ರ ಪ್ರದೇಶದ ಹೈಕೋರ್ಟ್ ಹೇಳಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಪ್ರಕರಣದ ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದ ಅಪರಾಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ವಿಚಾರವನ್ನು ನ್ಯಾಯಾಲಯ ಪ್ರಸ್ತಾಪಿಸಿದ್ದು, ಅಪರಾಧಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದೆ.
ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ದಾಖಲಾದ ಸಾಕ್ಷ್ಯಾಧಾರಗಳಲ್ಲಿ ವೀರ್ಯ ಸ್ಖಲನ ಆಗಿರದೆ, ದೌರ್ಜನ್ಯದ ಕುರುಹು ಸಿಕ್ಕರೂ ಪೋಕ್ಸೊ ಕಾಯಿದೆಯ ಸೆಕ್ಷನ್ 3ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಲೈಂಗಿಕ ದೌರ್ಜನ್ಯದ ಅಪರಾಧ ಎಂದು ನಿರ್ಣಯಿಸಲು ಅಷ್ಟು ಸಾಕು ಎಂದು ನ್ಯಾಯಮೂರ್ತಿ ಚೀಕಾಟಿ ಮಾನವೇಂದ್ರನಾಥ್ ರಾಯ್ ಅವರು ಅಭಿಪ್ರಾಯಪಟ್ಟಿದ್ದಾರೆ.
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದಾಗ, ಅದು ಪೋಕ್ಸೋ ಕಾಯಿದೆಯ ಸೆಕ್ಷನ್ 5ರ (ಎಮ್) ಅಡಿಯ ಲೈಂಗಿಕ ದೌರ್ಜನ್ಯಕ್ಕೆ ಸಮನಾಗಿರುತ್ತದೆ. ಹಾಗೂ ಸೆಕ್ಷನ್ 6ರಲ್ಲಿ ಹೇಳಲಾದ ತೀವ್ರ ತರವಾದ ಲೈಂಗಿಕ ದೌರ್ಜನ್ಯವನ್ನು ಮಾಡಿದ ವ್ಯಕ್ತಿಯ ವಿರುದ್ಧ ಅದು ಶಿಕ್ಷೆಯನ್ನು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ರಾಯ್ ತಮ್ಮ 22 ಪುಟಗಳ ತೀರ್ಪಿನಲ್ಲಿ ತಿಳಿಸಿದ್ದಾರೆ.