ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಅಶೋಕ್ ಎ. ಜಗತಾಪ್ ಅಲಿಯಾಸ್ ಭಾಯ್ ಜಗತಾಪ್ ಚುನಾವಣಾ ಆಯೋಗದ ವಿರುದ್ಧ ನಾಲಗೆ ಹರಿಬಿಟ್ಟು, ವಿವಾದಕ್ಕೆ ಗುರಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮನೆಯ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ ಎಂದು ಜಗತಾಪ್ ನಾಲಿಗೆ ಹರಿಬಿಟ್ಟಿದ್ದಾರೆ. ಮಾತ್ರವಲ್ಲ, ತನ್ನ ಹೇಳಿಕೆಗೆ ನಾನು ಸ್ವಲ್ಪವೂ ಕ್ಷಮೆಯಾಚಿಸಲ್ಲ. ಆಯೋಗವು ಮೋದಿ ಮತ್ತು ಇತರ ಮಂತ್ರಿಗಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರೆ ನಾನು ಹೇಳಿದ್ದು ಸರಿ ಎಂದಿದ್ದಾರೆ.
ಚುನಾವಣಾ ಆಯೋಗ ಇರೋದು ಪ್ರಜಾಪ್ರಭುತ್ವ ಬಲಪಡಿಸಲು, ದುರದೃಷ್ಟವಶಾತ್ ಅವುಗಳನ್ನು ದುರುಪಯೋಗ ಪಡಿಸಿಕೊಳ್ಳುವಂತಹ ಕೆಲಸ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ನಡೆಯುತ್ತಿವೆ. ಮಹಾರಾಷ್ಟ್ರದಲ್ಲಿ ರಾಜ್ಯದ ಜನರು ಮಹಾಯುತಿ ಆಡಳಿತವನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಆದ್ರೂ ಜಯ ಸಿಕ್ಕಿದೆ ಅಂದ್ರೆ, ಇದರ ಸಂಪೂರ್ಣ ಕ್ರೆಡಿಟ್ ಇವಿಎಂಗಳಿಗೆ ಸಲ್ಲುತ್ತದೆ. ಇಲ್ಲಿ ಇವಿಎಂಗಳನ್ನು ತಿರುಚಲಾಗಿದೆ, ಕೆಲವು ಸ್ಥಳಗಳಲ್ಲಿ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಪ್ರತಿಕ್ರಿಯಿಸಿ, ಸಾಂವಿಧಾನಿಕ ಸಂಸ್ಥೆಯನ್ನು ಅವಮಾನಿಸುವುದು, ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ. ಈಗ ಅವರು ಚುನಾವಣಾ ಆಯೋಗವನ್ನ ಅನುಮಾನಿಸುತ್ತಿದ್ದಾರೆ. ಜಾರ್ಖಂಡ್, ಜಮ್ಮು-ಕಾಶ್ಮೀರ, ವಯನಾಡ್, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಚುನಾವಣೆ ನಡೆದಾಗ ಚುನಾವಣಾ ಆಯೋಗ ಚೆನ್ನಾಗಿತ್ತು. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಚೆನ್ನಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.