ನವದೆಹಲಿ: ದೇಶದ ಖ್ಯಾತ ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧ ಅಮೆರಿಕದಲ್ಲಿ ಲಂಚ ಹಾಗೂ ವಂಚನೆ ಆರೋಪ ಕೇಳಿ ಬಂದಿದೆ. ಬಂಧನಕ್ಕೂ ವಾರೆಂಟ್ ಹೊರಡಿಸಲಾಗಿದೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.
ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳಿಗೆ ಶತಕೋಟಿ ಡಾಲರ್ ಲಂಚ ನೀಡಿರುವುದು ಹಾಗೂ ವಂಚಿಸಿರುವ ಆರೋಪ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಅವರ ಮೇಲಿದೆ. ಈ ಸಂಬಂಧ ಅದಾನಿ ಸೇರಿದಂತೆ ಹಲವರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್ ಕ್ರಿಮಿನಲ್ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕದ ನ್ಯಾಯಾಲಯ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಅದಾನಿ ಅವರನ್ನು ತಕ್ಷಣವೇ ಬಂಧಿಸಿ ವಿಚಾರಣೆಗೊಳಪಡಿಸಬೇಕು. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಹಾಗೂ ಅದಾನಿಯನ್ನು ರಕ್ಷಿಸುತ್ತಿರುವ ಮಾಧಬಿ ಪುರಿ ಬುಚ್ ಅವರನ್ನು ಸ್ಥಾನದಿಂದ ವಜಾಗೊಳಿಸಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಉದ್ಯಮಿಯು ಭಾರತ ಹಾಗೂ ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸಿರುವುದು ಇದೀಗ ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಜಾರ್ಖಂಡ್ ಹಾಗು ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಡಿದ್ದ 'ಒಂದಾಗಿದ್ದರೆ ಸುರಕ್ಷಿತರಾಗಿರುತ್ತೀರಿ' ಎಂಬ ಹೇಳಿಕೆಯನ್ನು ಉಲ್ಲೇಖಿಸಿರುವ ರಾಹುಲ್, ಪ್ರಧಾನಿ ಹಾಗೂ ಉದ್ಯಮಿಯ ಕಾಲೆಳೆದಿದ್ದಾರೆ.
'ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕು' ಎಂದೂ ಹೇಳಿರುವ ರಾಹುಲ್, ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದಾನಿ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.
'ಮೋದಿ ಸರ್ಕಾರವು ಅದಾನಿ ಅವರನ್ನು ರಕ್ಷಿಸುತ್ತಿದೆ. ಹಾಗಾಗಿ, ಅವರನ್ನು ಭಾರತದಲ್ಲಿ ಬಂಧಿಸುವುದೂ ಇಲ್ಲ, ತನಿಖೆ ನಡೆಸುವುದೂ ಇಲ್ಲ ಎಂಬ ಖಾತ್ರಿ ಇದೆ' ಎಂದು ಕುಟುಕಿದ್ದಾರೆ.