ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು ರೋಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಜುಲೈ 18 ರವರೆಗೆ ವಿಸ್ತರಿಸಿದೆ.
ಕೆ ಕವಿತಾ ಅವರನ್ನು ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಆಕೆಯ ವಕೀಲರು ನ್ಯಾಯಾಂಗ ಬಂಧನವನ್ನು ಕಟುವಾಗಿ ವಿರೋಧಿಸಿದರು.
ಆಕೆಯ ವಿರುದ್ಧ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ಅನ್ನು ರೋಸ್ ಅವೆನ್ಯೂ ಕೋರ್ಟ್ ನಾಳೆ ಪರಿಗಣಿಸುವ ಸಾಧ್ಯತೆಯಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು ಮುಂದಿನ 14 ದಿನಗಳವರೆಗೆ ವಿಸ್ತರಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಅವರ ವಕೀಲರಾದ ಪಿ ಮೋಹಿತ್ ರಾವ್ ಅವರು ನ್ಯಾಯಾಂಗ ಬಂಧನವನ್ನು ವಿಸ್ತರಿಸುುದನ್ನು ವಿರೋಧಿಸಿದರು.
ಕೇಂದ್ರೀಯ ತನಿಖಾ ದಳ (ಸಿಬಿಐ) ಈಗಾಗಲೇ ಆಕೆಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಜುಲೈ 6 ರಂದು ಪರಿಗಣನೆಗೆ ಬಾಕಿ ಇದೆ. ಜೂನ್ 7 ರಂದು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಮೂರನೇ ಪೂರಕ ಚಾರ್ಜ್ ಶೀಟ್ ಇದಾಗಿದೆ.
ಸಿಬಿಐ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕವಿತಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಕೆಯನ್ನು ಮೊದಲು ಮಾರ್ಚ್ 15 ರಂದು ಜಾರಿ ನಿರ್ದೇಶನಾಲಯ ಬಂಧಿಸಿತು. ನಂತರ, ಆಕೆಯನ್ನು ಏಪ್ರಿಲ್ 11 ರಂದು ಸಿಬಿಐ ಬಂಧಿಸಿತು.