ಮಹಾದಾಯಿ ಮಧ್ಯಸ್ಥಿಕೆ ವಹಿಸಲು ಫಡ್ನವೀಸ್ ಸಿದ್ಧ

ಗುರುವಾರ, 6 ಅಕ್ಟೋಬರ್ 2016 (16:25 IST)
ದೀರ್ಘಕಾಲದ ಮಹಾದಾಯಿಯ ನದಿ ನೀರು ಹಂಚಿಕೆ ವಿವಾದದಲ್ಲಿ ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತುಕತೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಫಡ್ನವೀಸ್, ಎರಡು ರಾಜ್ಯಗಳ ನಡುವೆ ಮಧ್ಯಸ್ಥಿಕೆ  ವಹಿಸಲು ನಾನು ಸಿದ್ಧನಾಗಿದ್ದೇನೆ. ಈ ಆಹ್ವಾನವನ್ನು ಸ್ವೀಕರಿಸಿ ಮಹಾರಾಷ್ಟ್ರಕ್ಕೆ ಬನ್ನಿ. ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ ಪರ್ಸೇಕರ್ ಜತೆ ಕೂಡ ಮಾತನಾಡಿದ್ದೇನೆ. ಅವರು ಕೂಡ ಮಾತುಕತೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. 
 
ಅಕ್ಟೋಬರ್ 21 ರಂದು ಮುಂಬೈನಲ್ಲಿ ಸಭೆ ನಡೆಯಬಹುದೆಂದು ಹೇಳಲಾಗುತ್ತಿದ್ದು, ಮುಖ್ಯಮಂತ್ರಿಗಳ ಹೊರತಾಗಿ ಎರಡು ರಾಜ್ಯಗಳ ಜಲಸಂಪನ್ಮೂಲ ಸಚಿವರು ಮತ್ತು ಸಂಬಂಧಿತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
 
ಫಡ್ನವೀಸ್ ಆಹ್ವಾನದ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕದ ಜಲಸಂಪನ್ಮೂಲ ಖಾತೆ ಸಚಿವ ಎಮ್. ಬಿ ಪಾಟೀಲ್ ಸಭೆಯಲ್ಲಿ ಭಾಗವಹಿಸಲು ನಾವು ಸಮ್ಮತಿ ನೀಡಿದ್ದೇವೆ. ವಿವಾದ ಸೌಹಾರ್ದಯುತವಾಗಿ ಬಗೆಹರಿಯುವ ವಿಶ್ವಾಸ ನಮ್ಮದು ಎಂದಿದ್ದಾರೆ. 
 
ಮೂರು ರಾಜ್ಯಗಳು ಪರಷ್ಪರ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಜೆ.ಎಂ. ಪಾಂಚಾಲ್ ನೇತೃತ್ವದ ಮಹಾದಾಯಿ ನ್ಯಾಯಾಧೀಕರಣ ಈ ಹಿಂದೆ ಸಲಹೆ ನೀಡಿತ್ತು.  ಅದರಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆಗೆ ಬರುವಂತೆ ಗೋವಾ ಮತ್ತು ಮಹಾರಾಷ್ಟ್ರ ಸಿಎಂಗಳಿಗೆ ಪತ್ರ ಬರೆದಿದ್ದರು ಮತ್ತು ವಿವಾದ ಬಗೆಹರಿಸುವಲ್ಲಿ ಮಧ್ಯ ಪ್ರವೇಶಿಸುವಂತೆ ಪ್ರಧಾನಿ ಮೋದಿ ಅವರಿಗೂ ಪತ್ರ ರವಾನಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ