ಪ್ರಧಾನಿ ಸುರಕ್ಷತಾ ತಂಡದಲ್ಲಿ ನಕಲಿ ಐಪಿಎಸ್ ಅಧಿಕಾರಿ

ಗುರುವಾರ, 5 ಜನವರಿ 2017 (18:19 IST)
ಗುರುಗೋವಿಂದ ಸಿಂಗ್ ಜಿ ಮಹಾರಾಜರ 350ನೇ ಜನ್ಮದಿನಾಚರಣೆ ಪ್ರಯುಕ್ತ ಪಾಟ್ಣಾದಲ್ಲಿಂದು ಆಯೋಜಿಸಲಾಗಿದ್ದ ಪ್ರಕಾಶ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಆಗಮಿಸುವ ಕೆಲ ಕ್ಷಣಗಳ ಮೊದಲು ಬಿಹಾರ ಪೊಲೀಸರು ನಕಲಿ ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. 

 
ಪ್ರಧಾನಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಆ ಸಮವಸ್ತ್ರಧಾರಿ ನಕಲಿ ಅಧಿಕಾರಿ ನಿರ್ದೇಶನಗಳನ್ನು ನೀಡುತ್ತಿದ್ದನೆನ್ನಲಾಗಿದೆ.
 
ಈತನ ಬಗ್ಗೆ ಇತರ ಪೊಲೀಸರಿಗೆ ಅನುಮಾನ ಬಂದಿದ್ದು ತಕ್ಷಣ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
 
ಗುರುಗೋವಿಂದ ಸಿಂಗ್ ಜಿ ಮಹಾರಾಜರ ಜನ್ಮದಿನ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯವೈರಿಗಳಾದ ಬಿಹಾರ್ ಮುಖ್ಯಮಂತ್ರಿ, ಜೆಡಿ(ಯು) ನಾಯಕ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಜತೆ ಪ್ರಧಾನಿ ಮೋದಿ ವೇದಿಕೆಯನ್ನು ಹಂಚಿಕೊಂಡರು.
 
ಬಿಹಾರ್ ರಾಜ್ಯಪಾಲ ರಾಮ್ ನಾಥ್ ಕೋವಿಂದ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ರವಿಶಂಕರ್ ಪ್ರಸಾದ್, ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಅನೇಕ ಕೇಂದ್ರ ಸಚಿವರು, ಗಣ್ಯರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 
 
ಪ್ರಕಾಶ ಪರ್ವದ ನಿಮಿತ್ತ ವಿಶೇಷ ಅಂಚೆಚೀಟಿಗಳನ್ನು  ಬಿಡುಗಡೆ ಮಾಡಿದ ಅವರು ಅಸ್ಥಾಯಿ ಗುರುದ್ವಾರದಲ್ಲಿ ಆಯೋಜಿಸಲಾಗಿದ್ದ ಲಂಗರ್‌ನಲ್ಲಿ ಕೂಡ ಪಾಲ್ಗೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ