ಚುನಾವಣಾ ಪ್ರಚಾರದಲ್ಲಿ ಸಮಯದಲ್ಲಿ ಲಂಚ ಪಡೆದುಕೊಳ್ಳಿ ಎಂದು ಮತದಾರರಿಗೆ ಸಲಹೆ ನೀಡಿದ್ದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ಗೋವಾದ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಮತದಾರರಿಗೆ ಆಮಿಷ ತೋರಿಸಿದ್ದಕ್ಕಾಗಿ ಕೇಜ್ರಿವಾಲ್ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೂಕ್ತ ವಿಭಾಗಗಳಡಿಯಲ್ಲಿ ದೂರು ದಾಖಲಿಸಬೇಕು. ದೆಹಲಿ ಸಿಎಂ ಮತ್ತು ಆಪ್ ಪ್ರಚಾರಕರಾಗಿ ಅವರು ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿತ್ತು. ನೀತಿ ಸಂಹಿತೆ ಉಲ್ಲಂಘಿಸಿರುವ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಆಯೋಗ ಸೂಚಿಸಿದೆ.
ಆಯೋಗದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ನನ್ನ ಮೇಲಿನ ಕ್ರಮ ತಪ್ಪು, ನಾನು ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
ಜನವರಿ 8 ರಂದು ಗೋವಾದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಜ್ರಿವಾಲ್ "ಬಿಜೆಪಿ, ಕಾಂಗ್ರೆಸ್ ಎಷ್ಟೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಹೊಸ ನೋಟನ್ನು ಮಾತ್ರ ಸ್ವೀಕರಿಸಿ. ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು 5,000 ನೀಡಿದರೆ 10,000 ಕೇಳಿ ಪಡೆದುಕೊಳ್ಳಿ. ಆದರೆ ನಮ್ಮ ಪಕ್ಷಕ್ಕೆ ಮತ ನೀಡಿ", ಎಂದು ಜನರಿಗೆ ಕರೆ ಕೊಟ್ಟಿದ್ದರು.