ಧೋನಿ ಪತ್ನಿ ವಿರುದ್ಧ ವಂಚನೆ ಪ್ರಕರಣ ದಾಖಲು

ಬುಧವಾರ, 12 ಅಕ್ಟೋಬರ್ 2016 (16:20 IST)
ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಸೇರಿದಂತೆ ನಾಲ್ವರ ಮೇಲೆ ವಾಣಿಜ್ಯ ವ್ಯವಹಾರದಲ್ಲಿ ಬಹುಕೋಟಿ ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು ಎಫ್ಐಆರ್ ದಾಖಲಾಗಿದೆ. ಅರುಣ್ ಪಾಂಡೆ, ಶುಭವತಿ ಪಾಂಡೆ ಮತ್ತು ಪ್ರತಿಮಾ ಪಾಂಡೆ ಆರೋಪವನ್ನೆದುರಿಸುತ್ತಿರುವ ಇತರ ಮೂವರಾಗಿದ್ದಾರೆ. 
ಡೇನಿಸ್ ಅರೋರ್ ಎಂಬ ಉದ್ಯಮಪತಿ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 420ರ ಅನ್ವಯ ಗುರಗಾಂವ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
 
ರಿತಿ ಎಂಎಸ್‌ಡಿ ಅಲ್ಮೊಡೆ ಪ್ರೈವೆಟ್ ಕಂಪನಿಯ ಪಾಲುದಾರರಾಗಿದ್ದ ಈ ನಾಲ್ವರು, ಅರೋರ ಅವರು 39% ಶೇರು ಹೊಂದಿರುವ ಫಿಟ್‌ನೆಸ್ ಸೆಂಟರ್‌ಗಳನ್ನೊಳಗೊಂಡ ಸ್ಪೋರ್ಟ್ಸ್ ವರ್ಲ್ಡ್ ಪ್ರೈವೆಟ್ ಲಿಮಿಟೆಡ್‌ ಕಂಪನಿಯನ್ನು ಕಳೆದ ವರ್ಷ ಖರೀದಿಸಿದ್ದರು. ನಡೆದ ವ್ಯವಹಾರದ ಪ್ರಕಾರ ಸಾಕ್ಷಿ ಮತ್ತು ಇತರ ಮೂವರು ಈ ವರ್ಷ ಮಾರ್ಚ್ ತಿಂಗಳೊಳಗೆ ಅರೋರಾಗೆ 11 ಕೋಟಿ ಪಾವತಿಸಬೇಕಿತ್ತು. ಆದರೆ ಇಲ್ಲಿಯವರೆಗೆ ತಮ್ಮ ಕೈ ಸೇರಿರುವುದು2.25ಕೋಟಿ ಮಾತ್ರ ಎಂದು ಅರೋರಾ ದೂರಿದ್ದಾರೆ. 
 
ಈ ಕುರಿತು ಸಾಕ್ಷಿ ಇನ್ನು ಕೂಡ ಪ್ರತಿಕ್ರಿಯಿಸಿಲ್ಲ. ಕಳೆದ ವರ್ಷವೇ ಅವರು ಕಂಪನಿಯ ಪಾಲುದಾರಿಕೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ