ಕರ್ನಾಟಕ ರಾಜ್ಯಸಭೆ ಚುನಾವಣೆ 2018: ಐವರು ಅಭ್ಯರ್ಥಿಗಳು ಕಣದಲ್ಲಿ

ಬುಧವಾರ, 21 ಮಾರ್ಚ್ 2018 (18:54 IST)
ಕಳೆದ ತಿಂಗಳು ನಾಲ್ವರು ರಾಜ್ಯಸಭೆ ಸದಸ್ಯರ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ತೆರುವಾದ ಸ್ಥಾನಗಳನ್ನು ತುಂಬಲು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದಿಂದ ಮೂವರು, ಬಿಜೆಪಿ ಮತ್ತು ಜೆಡಿಎಸ್‌ನಿಂದ ತಲಾ ಒಬ್ಬೊಬ್ಬ ಅಭ್ಯರ್ಥಿಗಳು ಚುನಾವಣೆ ಕಣಕ್ಕೆ ಧುಮಕಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಡಾ.ಎಲ್.ಹನುಮಂತಯ್ಯ, ಡಾ.ಸಯೀದ್ ನಾಸೀರ್ ಹುಸೈನ್ ಮತ್ತು ಜಿ.ಸಿ.ಚಂದ್ರಶೇಖರ್ ಅಭ್ಯರ್ಥಿಗಳಾಗಿದ್ದು, ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್, ಜೆಡಿಎಸ್ ಪಕ್ಷದಿಂದ ಬಿ.ಎಂ.ಫಾರೂಕ್ ಚುನಾವಣೆ ಕಣದಲ್ಲಿದ್ದಾರೆ.
 
ರಾಜ್ಯಸಭೆ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ನಿನ್ನೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. 
 
ರಾಜ್ಯಸಭೆಗೆ ಮಾರ್ಚ್ 23 ರಂದು ಮತದಾನ ನಡೆಯಲಿದ್ದು ಅಂದು ಸಂಜೆಯೇ ಫಲಿತಾಂಶ ಹೊರಬರಲಿದೆ.ಪ್ರಸ್ತುತ ಶಾಸಕರ ಬಲಾಬಲದ ಪ್ರಕಾರ ಕಾಂಗ್ರೆಸ್‌ನಿಂದ ಇಬ್ಬರು ಅಭ್ಯರ್ಥಿಗಳು ಮತ್ತು ಬಿಜೆಪಿಯಿಂದ ಒಬ್ಬ ಅಭ್ಯರ್ಥಿ ಸುಲಭವಾಗಿ ಜಯಗಳಿಸಬಹುದಾಗಿದೆ.
 
ಏತನ್ಮಧ್ಯೆ, ಕಾಂಗ್ರೆಸ್ ಪಕ್ಷದ ಮೂರನೇ ಅಭ್ಯರ್ಥಿಯ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಹಣಾಹಣಿ ನಡೆಯಲಿದೆ.
 
ಕಾಂಗ್ರೆಸ್ ಪಕ್ಷದ ರಾಜಕೀಯ ಲೆಕ್ಕಾಚಾರದ ಪ್ರಕಾರ, ರಾಜ್ಯಸಭೆ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ಸೇರಲಿರುವ ಏಳು ಜೆಡಿಎಸ್ ಬಂಡಾಯ ಶಾಸಕರು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಆಶಾಭಾವನೆ ಹೊಂದಿದೆ.
 
ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಸಣ್ಣ ಪಕ್ಷಗಳ ಶಾಸಕರಾದ ಬಿ.ಆರ್.ಪಾಟೀಲ್ (ಕೆಜೆಪಿ), ಬಿ.ನಾಗೇಂದ್ರ(ಸ್ವತಂತ್ರ) ಮತ್ತು ಅಶೋಕ್ ಖೇಣಿ (ಕೆಎಂಪಿ) ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ನಿರೀಕ್ಷೆಯನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ