ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ರಾಹುಲ್ ಗಾಂಧಿ ಬಳಿ ಕಣ್ಣೀರು ಹಾಕಿದ್ದು ಯಾಕೆ?
ಬುಧವಾರ, 21 ಮಾರ್ಚ್ 2018 (11:07 IST)
ಮಂಗಳೂರು : ದಕ್ಷಿಣ ಕನ್ನಡದ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು,’ ರಾಜ್ಯದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ರಾಜ್ಯದ ಬಹುತೇಕ ಎಲ್ಲಾ ಹಿರಿಯ ನಾಯಕರದು ಇದೇ ಸ್ಥಿತಿಯಾಗಿದೆ’ ಎಂದು ತಮ್ಮ ನೋವನ್ನು ರಾಹುಲ್ ಗಾಂಧಿ ಅವರ ಬಳಿ ಹೇಳಿ ಕಣ್ಣೀರು ಹಾಕಿದ್ದು, ಅವರನ್ನು ರಾಹುಲ್ ಗಾಂಧಿ ಅವರು ಸಂತೈಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಮಂಗಳವಾರ ರಾತ್ರಿ ರಾಹುಲ್ ಗಾಂಧಿಯವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಜನಾರ್ದನ ಪೂಜಾರಿ ಅವರು ತಮ್ಮ ಪಕ್ಷದ ಮೇಲಿನ ಅಸಮಾಧಾನವನ್ನು ರಾಹುಲ್ ಗಾಂಧಿ ಅವರ ಮುಂದೆ ಹೇಳಿಕೊಂಡಿದ್ದಾರೆ.
‘ಮುಖ್ಯಮಂತ್ರಿಗಳ ಈ ವರ್ತನೆ ನೋಡಿದರೆ ಪಕ್ಷಕ್ಕೆ ಮುಂದೆ ಅಪಾಯ ಇದೆ. ಈ ಕಾರಣಕ್ಕೆ ನಾನು ನಿಮ್ಮ ಪ್ರವಾಸದಲ್ಲಿ ಭಾಗಿಯಾಗಿಲ್ಲ. ಈ ಬಾರಿ ರಾಜ್ಯದಲ್ಲಿ ಪಕ್ಷ ಅಧಿಕಾರ ಹಿಡಿಯುವುದು ಕಷ್ಟ ಇದೆ. ಸಿದ್ದರಾಮಯ್ಯ ಈ ಬಾರಿ ನಾವೇ ಗೆಲ್ಲುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ. ನಮಗೆ ಗೌರವ ಕೊಡದಿದ್ದರೂ ಪರವಾಗಿಲ್ಲ, ಪಕ್ಷ ಉಳಿಸಲಿ ಸಾಕು. ಪಕ್ಷ ಉಳಿಯುವಂತೆ ಮಾಡುವುದು ನಿಮ್ಮ ಜವಾಬ್ದಾರಿ ‘ ಎಂದು ಜನಾರ್ದನ ಪೂಜಾರಿ ಅವರು ರಾಹುಲ್ ಗಾಂಧಿ ಅವರ ಬಳಿ ಹೇಳಿರುವುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ