ದರೋಡೆ: ಸಬ್ ಇನ್ಸಪೆಕ್ಟರ್ ಸೇರಿ ಐವರು ಪೊಲೀಸರ ಬಂಧನ

ಬುಧವಾರ, 7 ಡಿಸೆಂಬರ್ 2016 (16:20 IST)
ಇದು ಬೇಲಿಯೇ ಎದ್ದ ಹೊಲ ಮೇಯ್ದ ಕಥೆ. ಉದ್ಯಮಪತಿಯೊಬ್ಬರನ್ನು ದರೋಡೆ ಮಾಡಿ 35.5 ಲಕ್ಷ ದೋಚಿದ್ದ ಆರೋಪದ ಮೇಲೆ ಒಬ್ಬ ಸಬ್ ಇನ್ಸಪೆಕ್ಟರ್ ಸೇರಿದಂತೆ ಐವರು ಪೊಲೀಸರನ್ನು ಸೋಮವಾರ ಬಂಧಿಸಲಾಗಿದೆ. ಕಳೆದ ತಿಂಗಳು 22 ರಂದು ಪೀಣ್ಯಾದ ಬಳಿ ಈ ಘಟನೆ ನಡೆದಿತ್ತು. 
ಬಂಧಿತ ಆರೋಪಿಗಳನ್ನು ಸಬ್ ಇನ್ಸಪೆಕ್ಟರ್ ಮಲ್ಲಿಕಾರ್ಜುನ್, ಪೇದೆಗಳಾದ ಮಂಜುನಾಥ್, ಗಿರೀಶ್, ಚಂದ್ರಶೇಖರ್ ಮತ್ತು ಅನಂತರಾಜು, ವೆಲ್ಡರ್‌ಗಳಾದ ಜಾಫರ್ ಮತ್ತು ಭಾಸ್ಕರ್ ಎಂದು ಗುರುತಿಸಲಾಗಿದೆ. ಇಬ್ಬರು ವೆಲ್ಡರ್‌ಗಳ ಜತೆ ಕೈ ಜೋಡಿಸಿಕೊಂಡು ಈ ಐವರು ಪೊಲೀಸರು ತುಮಕೂರು ಜಿಲ್ಲೆಯಲ್ಲಿ ಮೊಬೈಲ್ ಅಂಗಡಿಯನ್ನು ನಡೆಸುತ್ತಿರುವ ಗಂಗಾಧರ್ ಅವರನ್ನು ದರೋಡೆ ಮಾಡಿದ್ದರು. 
 
ಬಂಧಿತರಿಂದ 16 ಲಕ್ಷವನ್ನು ವಶಪಡಿಸಿಕೊಂಡಿರುವ ಪೊಲೀಸರು ಉಳಿದ ಹಣಕ್ಕಾಗಿ ಶೋಧ ನಡೆಸಿದ್ದಾರೆ.
 
ಗಂಗಾಧರ್ 38 ಲಕ್ಷ ಹಣದೊಂದಿಗೆ ಪೀಣ್ಯಾ 8ನೇ ಮೈಲಿಗೆ ಬಂದಿದ್ದರು. ಅಲ್ಲಿ ಅವರನ್ನು ದರೋಡೆ ಮಾಡಲಾಗಿತ್ತು. ಘಟನೆ ನಡೆದ 12 ದಿನಗಳ ಬಳಿಕ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. 
 
ಘಟನೆ ವಿವರ: ನೋಟು ರದ್ಧತಿ ಬಳಿಕ ಜಾಫರ್ ಮತ್ತು ಭಾಸ್ಕರ್, ತಮ್ಮ ಬಳಿ ಫೋನ್ ನಂಬರ್ ಕೆಲ ಜನರಿಗೆ  ಕರೆ ಮಾಡಿ ತಾವು ನಿಮ್ಮ ಕಪ್ಪುಹಣವನ್ನು ಬಿಳಿ ಹಣವಾಗಿ ಮಾಡಿಕೊಡುತ್ತೇವೆ ಎಂದು ಹೇಳತೊಡಗಿದ್ದರು. ಅವರ ಈ ಬಲೆಗೆ ಗಂಗಾಧರ್ ಸಿಕ್ಕಿ ಬಿದ್ದಿದ್ದು ತಮ್ಮ ಬಳಿ ಸಾಕಷ್ಟು ಹಳೆಯ ನೋಟುಗಳಿದ್ದು ಅದನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡಿದ್ದಾನೆ. 30% ಕಮಿಷನ್ ನೀಡಬೇಕೆಂದು ಗಂಗಾಧರ್‌ಗೆ ಒಪ್ಪಿಸಿದ ಇಬ್ಬರು ಪೀಣ್ಯಾದಲ್ಲಿ ಆತನ ಭೇಟಿಗೆ ನಿಗದಿ ಪಡಿಸಿದರು. 
 
ಈ ಕುರಿತು ಸಬ್ ಇನ್ಸಪೆಕ್ಟರ್ ಮಲ್ಲಿಕಾರ್ಜುನ್ ಜತೆ ಮಾತನಾಡಿ ವಂಚನೆ ಮಾಡುವ ಡೀಲ್ ಕುದುರಿಸಿದ ಭಾಸ್ಕರ್ ಮತ್ತು ಜಾಫರ್ ಅವರಿಗೂ ಶೇರ್ ನೀಡುವುದಾಗಿ ವಾಗ್ದಾನ ಮಾಡಿದ್ದರು. 
 
ಜಾಫರ್ ಮತ್ತು ಭಾಸ್ಕರ್ 8ನೇ ಮೈಲಿಯಲ್ಲಿ ಗಂಗಾಧರ್ ಅವರನ್ನು ಭೇಟಿಯಾಗಿದ್ದಾರೆ. ಪೂರ್ವ ಯೋಜನೆಯಂತೆ ಮಲ್ಲಿಕಾರ್ಜುನ್ ಮತ್ತು ಇತರ ನಾಲ್ವರು ಪೇದೆಗಳು ಅಲ್ಲಿಗೆ ಆಗಮಿಸಿ ಈ ಹಣಕ್ಕೆ ದಾಖಲೆಗಳನ್ನು ಕೇಳಿದ್ದಾರೆ. ಆದರೆ  ಯಾವುದೇ ದಾಖಲೆಗಳನ್ನು ತೋರಿಸಲು ಗಂಗಾಧರ್ ವಿಫಲರಾದಾಗ ಹಣವನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ