ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಬುಧವಾರದಂದು ದರ್ರಾಂಗ್ ಜಿಲ್ಲೆಯಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ.
ಪ್ರಸ್ತುತ ಅಸ್ಸಾಂನಲ್ಲಿ ಮುಂಗಾರು ಪೂರ್ವದ ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೆ ರಾಜ್ಯದ 34 ಜಿಲ್ಲೆಗಳ ಪೈಕಿ 27 ಜಿಲ್ಲೆಗಳಲ್ಲಿ 6.62 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1,414 ಹಳ್ಳಿಗಳಲ್ಲಿ ಸುಮಾರು 8,260 ಮನೆಗಳು ಭಾಗಶಃ ಮತ್ತು ಸಂಪೂರ್ಣವಾಗಿ ಹಾನಿಗೊಳಗಾಗಿವೆ.ಅಸ್ಸಾಂನ ಬರಾಕ್ ಕಣಿವೆ ಮತ್ತು ದಿಮಾ ಹಸಾವೊ ಜಿಲ್ಲೆ ಮತ್ತು ನೆರೆಯ ರಾಜ್ಯಗಳಾದ ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದಲ್ಲಿ ನಿರಂತರ ಮಳೆಯಿಂದಾಗಿ ಭೂಕುಸಿತವಾಗಿದ್ದು ರೈಲು ಮತ್ತು ರಸ್ತೆ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ. ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ಭೂಕುಸಿತಗಳು ವಿನಾಶವನ್ನೇ ಉಂಟುಮಾಡಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳೆದ ಐದು ದಿನಗಳಿಂದ ಸಿಂಗಲ್ ರೈಲು ಮಾರ್ಗವೂ ಸ್ಥಗಿತಗೊಂಡಿದೆ.