ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್ನ 13 ಸಾವಿರ ಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಹೆಸರನ್ನು ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಪಟ್ಟಿಯಿಂದ ತೆಗೆದು ಹಾಕಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್, ನಮ್ಮ ಕಾನೂನು ತಂಡದ ಪ್ರಯತ್ನಗಳಿಂದಾಗಿ ನನ್ನ ಕಕ್ಷಿದಾರರ ಮೇಲಿರುವ ಆರೋಪ ಮತ್ತು ಅವರ ಮೇಲೆ ಹೇರಿದ ಹಲವಾರು ಷರತ್ತುಗಳನ್ನು ಅಂತರರಾಷ್ಟ್ರೀಯ ಸಮುದಾಯವು ಅನುಮೋದಿಸದ ಕಾರಣ ರೆಡ್ ಕಾರ್ನರ್ ನೋಟಿಸ್ ಪಟ್ಟಿಯಿಂದ ಇಂಟರ್ಪೋಲ್ ತೆಗೆದು ಹಾಕಿದೆ ಎಂದು ತಿಳಿಸಿದ್ದಾರೆ.
ರೆಡ್ ಕಾರ್ನರ್ ನೋಟಿಸ್ ಪಟ್ಟಿಯಿಂದ ತಮ್ಮ ಹೆಸರು ತೆಗೆದು ಹಾಕುವಂತೆ ಚೋಕ್ಸಿ ಪರ ವಕೀಲರು ಫ್ರಾನ್ಸ್ನ ಲಿಯಾನ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಅವರ ಹೆಸರನ್ನು ಡೇಟಾಬೇಸ್ನಿಂದ ಕೈಬಿಡಲಾಗಿದೆ. ಇಂಟರ್ಪೋಲ್ ನಿರ್ಧಾರದ ಬಗ್ಗೆ ಕೇಂದ್ರೀಯ ತನಿಖಾ ದಳ ಇಲ್ಲಿಯರೆಗೆ ಯಾವುದೇ ಪ್ರತಿಕ್ರಿಯೆನೀಡಿಲ್ಲ.
ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಆರೋಪಿಗಳು ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನ ಮಾಡಬಹುದು. ರೆಡ್ ಕಾರ್ನರ್ ನೋಟಿಸ್ ಪಟ್ಟಿಯಿಂದ ಹೆಸರನ್ನು ತೆಗೆದ ಹಿನ್ನೆಲೆಯಲ್ಲಿ ಭಾರತವನ್ನು ಹೊರತುಪಡಿಸಿ ಮೆಹುಲ್ ಚೋಕ್ಸಿ ಯಾವುದೇ ದೇಶಕ್ಕೆ ಮುಕ್ತವಾಗಿ ಪ್ರಯಾಣಿಸಬಹುದು.