ವಿಶ್ವದಲ್ಲಿ ಸಮುದ್ರ ಕಲುಷಿತಗೊಳಿಸುತ್ತಿರುವ ನದಿಗಳಲ್ಲಿ ಗಂಗಾನದಿಗೆ 2ನೇ ಸ್ಥಾನ

ಶನಿವಾರ, 10 ಜೂನ್ 2017 (11:19 IST)
ನವದೆಹಲಿ: ಹಿಂದೂಗಳ ಪವಿತ್ರ ನದಿ ಗಂಗೆ ತಾನು ಕಲುಷಿತಗೊಳ್ಳುತ್ತಿರುವುದಲ್ಲದೇ ಸಮುದ್ರವನ್ನು ಮಲಿನಗೊಳಿಸುತ್ತಿದೆ. ಹೀಗೆ ಸಮುದ್ರಗಳನ್ನುಕಲುಷಿತಗೊಳಿಸುತ್ತಿರುವ ನದಿಗಳಲ್ಲಿ ಭಾರತದ ಪವಿತ್ರ ಗಂಗಾ ನದಿ  ವಿಶ್ವದಲ್ಲೇ 2ನೇ ಸ್ಥಾನ ಪಡೆದುಕೊಂಡಿದೆ ಎಂಬ ಅಪಖ್ಯಾತಿಗೆ ಒಳಗಾಗಿದೆ.
 
ಪ್ರತೀ ವರ್ಷ ಗಂಗೆಯಲ್ಲಿ ಸುಮಾರು 115,000 ಟನ್ ಪ್ಲಾಸ್ಟಿಕ್ ಮ್ತತು ಕಲ್ಮಶ ಸೇರುತ್ತಿದೆ. ಅದೇ ಕಲ್ಮಶದೊಂದಿಗೆ ಸಮುದ್ರ ಸೇರಿ ಅದನ್ನೂ ಕೂಡ ಕಲುಷಿತಗೊಳಿಸುತ್ತಿದೆ ಎಂದು ಸಮುದ್ರ ಸ್ವಚ್ಛತಾ ಅಭಿಯಾನ  ನಡೆಸುತ್ತಿರುವ ಡಚ್ ಮೂಲದ ಸಂಸ್ಥೆಯೊಂದು ಹೇಳಿದೆ. ‘ದಿ ಓಷನ್‌ ಕ್ಲೀನಪ್‌' (ಸಮುದ್ರ ಸ್ವಚ್ಛತೆ) ಎಂಬ ನೆದರ್ಲೆಂಡ್‌ ಪ್ರತಿಷ್ಠಾನವು ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನ ನದಿಗಳು, ಸಮುದ್ರಕ್ಕೆ ಪ್ರತಿ ವರ್ಷ 1.15-2.41 ದಶಲಕ್ಷ ಟನ್‌ ಪ್ಲಾಸ್ಟಿಕ್‌ ತಂದು ಸೇರಿಸುತ್ತವೆ. ಇಷ್ಟೊಂದು ಪ್ಲಾಸ್ಟಿಕ್  ಅನ್ನು ಸಮುದ್ರದಿಂದ ತೆಗೆದು ಸ್ವಚ್ಛಗೊಳಿಸಲು 48 ಸಾವಿರದಿಂದ 1 ಲಕ್ಷ ಟ್ರಕ್‌ ಗಳು ಬೇಕಾಗಬಹುದು ಎಂದು ಹೇಳಿದೆ. 
 
ವರದಿಯ ಪ್ರಕಾರ ಅತಿ ಹೆಚ್ಚು ಮಾಲಿನ್ಯ ಸೃಷ್ಟಿಸುವ ನದಿ ಎನ್ನಿಸಿಕೊಂಡಿರುವುದು ಚೀನಾದ ಯಾಂಗ್‌ಟ್ಸೆ ನದಿ. ಇದು 3,33,000 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪೂರ್ವ ಚೀನಾ ಸಮುದ್ರಕ್ಕೆ ತಂದು ಸುರಿಯುತ್ತದೆ. ಬಳಿಕದ ಸ್ಥಾನ  ಭಾರತದ ಗಂಗಾ ನದಿಯದ್ದಾಗಿದ್ದು, ಗಂಗಾ ನದಿ ಪ್ರತೀ ವರ್ಷ ಬರೊಬ್ಬರಿ 1,15,000 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಂಗಾಳಕೊಲ್ಲಿಗೆ ತಂದು ಸೇರಿಸುತ್ತಿದೆ.
 

ವೆಬ್ದುನಿಯಾವನ್ನು ಓದಿ