ಮುಂಬೈ : ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆ ಮಾಡಿದ ಒಂದು ಟ್ವೀಟ್ ಹಲವು ಗೊಂದಲಗಳಿಗೆ ಕಾರಣವಾಗಿತ್ತು.
ಆ ಬಳಿಕ ಇದೀಗ ಈ ಬಗ್ಗೆ ಖುದ್ದು ಗಂಗೂಲಿ ನಾನು ಮಾರ್ಗದರ್ಶಕರ ರಾಯಭಾರಿಯಾಗಿ ಹೊಸ ಹೆಜ್ಜೆ ಇಡುತ್ತಿದ್ದೇನೆ ಎಂದು ಟ್ವಿಟ್ ಮಾಡಿ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದೇನೆ ಎಂದು ಗಂಗೂಲಿ ನಿನ್ನೆ ಮಾಡಿದ ಟ್ವೀಟ್ನಿಂದಾಗಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಗಂಗೂಲಿ ರಾಜಕೀಯಕ್ಕೆ ಎಂಟ್ರಿಕೊಡಲಿದ್ದಾರೆ ಎಂಬ ಚರ್ಚೆಗಳು ಹೆಚ್ಚಾಯಿತು. ಇದೀಗ ಖುದ್ದು ಸೌರವ್ ಗಂಗೂಲಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನನ್ನ ಈ ಹಿಂದಿನ ಒಂದು ಪೋಸ್ಟ್ ತುಂಬಾ ಚರ್ಚೆಗೆ ಕಾರಣವಾಗಿತ್ತು. ನಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದು, ಒಂದು ಗುಂಪಿನ ಜನ ಯಾವುದೇ ಸ್ವಾರ್ಥವಿಲ್ಲದೆ ಈ ದೇಶದ ಏಳಿಗೆಗಾಗಿ ಶ್ರಮಿಸುತ್ತಿದೆ. ಇದು ಈ ಬಾರಿಯ ಐಪಿಎಲ್ ಯಶಸ್ಸಿನ ಬಳಿಕ ಮತ್ತೊಮ್ಮೆ ನನಗೆ ಅರಿವಾಗಿದೆ. ಪ್ರತಿ ತಂಡದ ಕೋಚ್ಗಳು ತಮ್ಮ ತಂಡದ ಯಶಸ್ಸಿನ ಮಾರ್ಗದರ್ಶಕರಾಗಿ ಶಕ್ತಿಮೀರಿ ಶ್ರಮಿಸಿದ್ದಾರೆ.
ಇದು ಕ್ರಿಕೆಟ್ಗೆ ಮಾತ್ರ ಸೀಮಿತವಲ್ಲ. ಪ್ರತಿ ಕ್ಷೇತ್ರದಲ್ಲೂ ಇದನ್ನು ಕಾಣಬಹುದು ಶಿಕ್ಷಣ, ಫುಟ್ಬಾಲ್, ಮ್ಯೂಸಿಕ್ ಹಾಗೂ ಇತರ ಯಾವುದೇ ಕ್ಷೇತ್ರ ಆದರೂ ಕೂಡ ಮಾರ್ಗದರ್ಶಕರು ಮಹತ್ವದ ಪಾತ್ರ ವಹಿಸಿರುತ್ತಾರೆ. ನಾನು ಈ ಹಂತಕ್ಕೇರಲು ನನ್ನ ಕೋಚ್ಗಳು ಕಾರಣರಾಗಿದ್ದಾರೆ.