ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು : ಹೈಕೋರ್ಟ್
ಮಂಗಳವಾರ, 21 ಜೂನ್ 2022 (08:30 IST)
ಚಂಡೀಗಢ : 16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಹುಡುಗಿಯರು ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಳ್ಳಬಹುದು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತೀರ್ಪು ನೀಡಿದೆ.
ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಪಠಾಣ್ಕೋಟ್ ಮೂಲದ ಮುಸ್ಲಿಂ ದಂಪತಿಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ಏಕಸದಸ್ಯ ಪೀಠ ಈ ಆದೇಶ ಪ್ರಕಟಿಸಿದೆ.
ಅರ್ಜಿದಾರರು ತಮ್ಮ ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ಕಾರಣಕ್ಕಾಗಿ, ಅವರು ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಇಸ್ಲಾಮಿಕ್ ಶರಿಯಾ ನಿಯಮವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಬೇಡಿ, ಮುಸ್ಲಿಂ ವೈಯಕ್ತಿಕ ಕಾನೂನು ಅಡಿ ಮುಸ್ಲಿಂ ಮದುವೆಯನ್ನು ಮಾನ್ಯ ಮಾಡಲಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ಸರ್ ದಿನ್ಶಾ ಫರ್ದುಂಜಿ ಮುಲ್ಲಾ ಅವರ ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ ಪುಸ್ತಕದ ಆರ್ಟಿಕಲ್ 195 ರ ಪ್ರಕಾರ, ಹುಡುಗಿ 16 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದು, ಹುಡುಗ 21 ವರ್ಷ ಮೀರಿದರೆ ಮದುವೆಯಾಗಬಹುದು. ಈ ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ಕಾನೂನುಗಳ ಪ್ರಕಾರ ಪ್ರಾಪ್ತರಾದ ಕಾರಣ ಮದುವೆ ಕಾನೂನುಬದ್ಧವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ದಂಪತಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಮತ್ತು ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್ಎಸ್ಪಿ ಪಠಾಣ್ಕೋಟ್ಗೆ ಕೋರ್ಟ್ ನಿರ್ದೇಶನ ನೀಡಿದೆ.