ಅರೆಸ್ಟ್ ಆಗುವುದರ ಜೊತೆಗೆ ದಾಖಲೆ ಮಾಡಿದ ಜಾರ್ಖಂಡ್ ಸಿಎಂ ಸೊರೇನ್

Krishnaveni K

ಗುರುವಾರ, 1 ಫೆಬ್ರವರಿ 2024 (10:07 IST)
ರಾಂಚಿ:  ಭೂಅಕ್ರಮ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ದಾಖಲೆಯನ್ನೂ ಮಾಡಿದ್ದಾರೆ.

10 ಬಾರಿ ನೋಟಿಸ್ ನೀಡಿಯೂ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡಿದ್ದ ಸಿಎಂ ಸೊರೇನ್ ನಿವಾಸಕ್ಕೆ ನಿನ್ನೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಸುದೀರ್ಘ ಕಾಲ ವಿಚಾರಣೆ ನಡೆಸಿದ ನಂತರ ಬಂಧಿಸಿದ್ದಾರೆ. ಬಳಿಕ ಸೊರೇನ್ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಅಧಿಕಾರದಲ್ಲಿದ್ದಾಗಲೇ ಅಕ್ರಮ ಆರೋಪದಲ್ಲಿ ಬಂಧಿತರಾದ ಮೂರನೇ ಸಿಎಂ ಎಂಬ ದಾಖಲೆ ಮಾಡಿದರು.

ಅಧಿಕಾರದಲ್ಲಿದ್ದಾಗ ಬಂಧಿತರಾದ ಮೂವರು ಸಿಎಂ ಯಾರು?
ಹೇಮಂತ್ ಸೊರೇನ್ ಗಿಂತ ಮೊದಲು ಅವರ ತಂದೆ ಶಿಬು ಸೊರೇನ್ 2006 ರಲ್ಲಿ ಅಧಿಕಾರದಲ್ಲಿದ್ದಾಗಲೇ  ಅಪಹರಣ ಮತ್ತು ಕೊಲೆ ಪ್ರಕರಣವೊಂದರಲ್ಲಿ ಬಂಧಿತರಾಗಿದ್ದರು. ಇದಾದ ಬಳಿಕ 2006 ರಿಂದ 2008 ರವರೆಗೆ ಅಧಿಕಾರದಲ್ಲಿದ್ದ ಮಧು ಕೋಡಾ ಕೂಡಾ ಅಕ್ರಮ ಹಣ ವರ್ಗಾವಣೆ, ಮಧ‍್ಯವರ್ತಿಗಳಿಂದ ಸಾವಿರಾರು ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪದಲ್ಲಿ ಬಂಧಿತರಾಗಿದ್ದರು. ಇದೀಗ ಹೇಮಂತ್ ಸೊರೇನ್ ಕೂಡಾ ಅಕ್ರಮ ಆರೋಪದಲ್ಲಿ ಸಿಲುಕಿಕೊಂಡಿದ್ದಾರೆ.

ಚಂಪಯಿ ನೂತನ ಸಿಎಂ
ಹೇಮಂತ್ ಸೊರೇನ್ ರಾಜೀನಾಮೆ ನೀಡುತ್ತಿದ್ದಂತೇ ಜಾರ್ಖಂಡ್ ನ ನೂತನ ಸಿಎಂ ಆಗಿ ಸಾರಿಗೆ ಸಚಿವರಾಗಿದ್ದ ಚಂಪಯಿ ಸೊರೇನ್ ಅಧಿಕಾರಕ್ಕೇರಿದ್ದಾರೆ. ಚಂಪಯಿ ಜೆಎಂಎಂ ಪಕ್ಷದ ಉಪಾಧ‍್ಯಕ್ಷರು ಮತ್ತು ಸೊರೇನ್ ಕುಟುಂಬದ ಆಪ್ತರು. ಹೋರಾಟಗಳ ಮೂಲಕವೇ ಹೆಸರು ಮಾಡಿದ್ದ ಅವರಿಗೆ ಜಾರ್ಖಂಡ್ ಟೈಗರ್ ಎಂಬ ಅಡ್ಡಹೆಸರೂ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ