ಹಿರಿಯ ಹುರಿಯತ್ ನಾಯಕ ಸೈಯದ್ ಅಲಿ ಶಾ ಗಿಲಾನಿ ಅನಾರೋಗ್ಯಕ್ಕೀಡಾಗಿ ಬುಧವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿನ್ನೆ ರಾತ್ರಿ 11.45ರ ಸುಮಾರಿಗೆ ಗಿಲಾನಿ ತೀವ್ರ ಎದೆ ನೋವಿಗೊಳಗಾದರು. ಗೃಹಬಂಧನದಲ್ಲಿದ್ದ ಅವರನ್ನು ಪೊಲೀಸ್ ಕಣ್ಗಾವಲಿನಲ್ಲಿ ಶೇರ್-ಉ-ಕಾಶ್ಮೀರ್ ವೈದ್ಯಕೀಯ ವಿದ್ಯಾಲಯಕ್ಕೆ ದಾಖಲಿಸಲಾಯಿತು.
ಇಂದು ನಸುಕಿನ ಜಾವ 2.45ರ ಸುಮಾರಿಗೆ ಜಮ್ಮು&ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಗಿಲಾನಿಗೆ ಇಸಿಜಿ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಯಿತು. ಬಳಿಕ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ನುರಿತ ವೈದ್ಯರು ಅವರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹುರಿಯತ್ ವಕ್ತಾರ, ಗಿಲಾನಿ ಆರೋಗ್ಯ ಸ್ಥಿರವಾಗಿದ್ದು , ಅವರು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.