ನವದೆಹಲಿ : 18ನೇ ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತಕ್ಕೆ ಆಗಮಿಸಿದ್ದು, ನಾನೊಬ್ಬ ಹೆಮ್ಮೆಯ ಹಿಂದೂ ಎಂದು ಹೇಳಿದ್ದಾರೆ.
ಭಾರತಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಹೆಮ್ಮೆಯ ಹಿಂದೂ. ನಾನು ಹಿಂದೂ ಆಗಿಯೇ ಬೆಳೆದಿದ್ದೇನೆ. ನಾನು ಹೀಗೆಯೇ ಇದ್ದೇನೆ. ಮುಂದಿನ ಒಂದರಡು ದಿನಗಳಲ್ಲಿ ಹಲವು ದೇವಾಲಯಗಳಿಗೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದರು.
ಖಲಿಸ್ತಾನಿ ಕೃತ್ಯವನ್ನು ಖಂಡಿಸಿದ ಅವರು, ಭಾರತದ ಸಹಾಯದೊಂದಿಗೆ ಖಲಿಸ್ತಾನಿ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಅಲ್ಲದೇ ಪ್ರಧಾನಿ ಮೋದಿಯವರ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದರು.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಶುಕ್ರವಾರ ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿ ಅವರನ್ನು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಸ್ವಾಗತಿಸಿದರು. ಅಲ್ಲದೇ ಸುನಕ್ ದಂಪತಿಗೆ ಭಗವದ್ಗೀತೆ ಮತ್ತು ಹನುಮಾನ್ ಚಾಲೀಸಾ ಪ್ರತಿ, ರುದ್ರಾಕ್ಷಿಯನ್ನು ನೀಡಿದರು.