ಧ್ವಜಾರೋಹಣ ಮಾಡಿ ಭದ್ರತಾ ಅಧಿಕಾರಿಯಿಂದ ಶೂ ಕಟ್ಟಿಕೊಂಡ ಸಚಿವ

ಮಂಗಳವಾರ, 16 ಆಗಸ್ಟ್ 2016 (12:19 IST)
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಳ್ಳುವುದರ ಮೂಲಕ ಓಡಿಶಾದ ಸಚಿವ ಜೋಗೇಂದ್ರ ಬೆಹೆರಾ ಹೊಸ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. 

ಸೋಮವಾರ ಸಚಿವರು ಕಿಂಯೋಜರ್ ಜಿಲ್ಲಾಡಳಿತದ ಮುಂಭಾಗದಲ್ಲಿ ಧ್ವಜಾರೋಹಣ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದೃಶ್ಯ ಕಂಡು ಬಂದಿತ್ತು. 
 
ಸಮಾರಂಭದಲ್ಲಿ ಬೆಹೆರಾ ಮುಖ್ಯ ಅತಿಥಿಗಳಾಗಿದ್ದರು. ಧ್ವಜಾರೋಹಣವನ್ನು ಮಾಡಿದ ಬಳಿಕ ಕೆಳಗೆ ಬಿಚ್ಚಿಟ್ಟಿದ್ದ ಶೂ ತೊಟ್ಟುಕೊಂಡ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವರು ಭದ್ರತಾ ಅಧಿಕಾರಿಯಿಂದ ಲೇಸ್ ಕಟ್ಟಿಸಿಕೊಂಡರು. 
 
ಈ ದೃಶ್ಯಾವಳಿಯನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿದಾಗ ಪ್ರತಿಕ್ರಿಯಿಸಿದ ಸಚಿವರು, ನಾನು ವಿಐಪಿ, ಧ್ವಜಾರೋಹಣ ಮಾಡಿದ್ದೇನೆ. ಇದನ್ನು  ಭದ್ರತಾ ಅಧಿಕಾರಿ ಮಾಡಿಲ್ಲ ಎಂದು ಅಸಂಬದ್ಧವಾಗಿ ಉತ್ತರಿಸಿದ್ದಾರೆ. 
 
ಘಟನೆ ಕುರಿತು ಮಾತನಾಡಿರುವ ವಕೀಲ ಪ್ರಹ್ಲಾದ್‌ ಸಿಂಗ್‌, ಸರ್ಕಾರಿ ನೌಕರಸ್ಥನಿಂದ ಶೂ ಲೇಸ್‌ ಕಟ್ಟಿಸಿಕೊಳ್ಳುವ ಮೂಲಕ ಸಚಿವರು ಬ್ರಿಟಿಷ್‌ ಆಡಳಿತದ ವರ್ತನೆ ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ಸಚಿವರ ಈ ಹೇಳಿಕೆಗೆ ಎಲ್ಲೆಡೆಯಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ಓಡಿಶಾ ಸರ್ಕಾರ ಮಾತ್ರ ಯಾವುದೇ ಹೇಳಿಕೆ ನೀಡಿಲ್ಲ. 
 
ಸಚಿವರ ಈ ವರ್ತನೆಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಸರ್ಕಾರಿ ಅಧಿಕಾರಿ ಸಚಿವರಿಗೆ ಶೂ ಲೇಸ್ ಕಟ್ಟುತ್ತಿರುವುದು ಬ್ರಿಟಿಷ್ ಆಡಳಿತ ಈಗಲೂ ಅಸ್ತಿತ್ವದಲ್ಲಿದೆ ಎಂಬುದನ್ನು ತೋರಿಸುತ್ತದೆ ಎಂದು ವಕೀಲರಾಗಿರುವ ಪ್ರಹ್ಲಾದ್ ಸಿಂಗ್ ಎಂಬುವವರು ಕಿಡಿಕಾರಿದ್ದಾರೆ. 
 
ಸಚಿವರ ಈ ದುರ್ವರ್ತನೆಗೆ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. 

ವೆಬ್ದುನಿಯಾವನ್ನು ಓದಿ