ಶಶಿಕಲಾ ಸಿಎಂ ಆದರೆ ಮಿಲಿಟರಿ ಆಡಳಿತ ನಿಶ್ಚಿತ: ಜಯಾ ಸೊಸೆ

ಭಾನುವಾರ, 5 ಫೆಬ್ರವರಿ 2017 (12:43 IST)
ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಸ್ಥಾನಕ್ಕೇರಲಿದ್ದಾರೆ ಎಂಬ ವರದಿ ಹರಿದಾಡುತ್ತಿದು. ಈ ಬೆಳವಣಿಗೆ ಶಶಿಕಲಾ ಅವರ ರಾಜಕೀಯ ಶತ್ರು ಎಂದು ಈಗಾಗಲೇ ಬಿಂಬಿಸಿಕೊಂಡಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಅವರಿಗೆ ಬೇಸರವನ್ನುಂಟು ಮಾಡಿದಂತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ಶಶಿಕಲಾ ಸಿಎಂ ಆದರೆ ಮಿಲಿಟರಿ ಆಡಳಿತ ನಿಶ್ಚಿತ ಎಂದಿದ್ದಾರೆ. 
ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿರುವ ದೀಪಾ, ತಮಿಳುನಾಡು ರಾಜಕೀಯದಲ್ಲಾಗುತ್ತಿರುವ ಈ ಬೆಳವಣಿಗೆಗೆ ನಾನು ವಿರುದ್ಧವಾಗಿದ್ದೇನೆ. ರಾಜ್ಯದ ಜನರು ಕೂಡ ಇದನ್ನು ಸ್ವೀಕರಿಸಲಾರರು. ಶಶಿಕಲಾ ಆಡಳಿತದ ಚುಕ್ಕಾಣಿ ಹಿಡಿದರೆಂದರೆ ಅದು ಪ್ರಜಾಪ್ರಭುತ್ವದ ಪತನವಾಗಿ ಮಿಲಿಟರಿ ಆಡಳಿತವಾಗುವುದಂತೂ ನಿಶ್ಚಿತ ಎಂದಿದ್ದಾರೆ. 
 
ಇಂದು ಎಐಡಿಎಂಕೆ ಪಕ್ಷದ ನಿರ್ಣಾಯಕ ಸಭೆ ನಡೆಯಲಿದ್ದು, ಪನ್ನೀರ್ ಸೆಲ್ವಂ ಅವರ ಸ್ಥಾನಕ್ಕೆ ಶಶಿಕಲಾ ಅವರನ್ನೇರಿಸುವ ಸಾಧ್ಯತೆಗಳು ದಟ್ಟವಾಗಿವೆ. ಜಯಲಲಿತಾ ನಿಧನದ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದ್ದ ಶಶಿಕಲಾ ಮುಖ್ಯಮಂತ್ರಿ ಸ್ಥಾನಕ್ಕೇರುವುದು ನಿರೀಕ್ಷಿತ ಬೆಳವಣಿಗೆ.
 
ಜಯಾ ನಿಧನದ ಬಳಿಕ ಎಐಡಿಎಂಕೆ ಕಾರ್ಯಕರ್ತರು ಮತ್ತು ಕೆಲ ನಾಯಕರು ಪಕ್ಷ ಸೇರುವಂತೆ ದೀಪಾ ಅವರನ್ನು ಒತ್ತಾಯಿಸಿದ್ದರು. ಅದರಂತೆ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ, ಎಂಜಿಆರ್ ಶತಮಾನೋತ್ವದ ದಿನ ರಾಜಕೀಯ ರಂಗಪ್ರವೇಶ ಮಾಡಿದ್ದ, 42ರ ಹರೆಯದ ದೀಪಾ ಜಯಕುಮಾರ್,  ಜಯಾ ಆಪ್ತೆ, ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ವಿರುದ್ಧ ತೊಡೆ ತಟ್ಟಿದ್ದರು.
 
ಜಯಾ ಸ್ಥಾನವನ್ನು ನಾನು ತುಂಬಬೇಕೆಂಬುದು ಬೆಂಬಲಿಗರ ಅಪೇಕ್ಷೆ. ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ.ಬೇರೆಯವರು ಜಯಾ ಸ್ಥಾನವನ್ನು ಆಕ್ರಮಿಸಿಕೊಳ್ಳುವುದನ್ನು ನಾನು ಕೂಡ ಇಷ್ಟ ಪಡಲ್ಲ ಎಂದು ಗುಡುಗಿದ್ದರು. 
 
ನನ್ನೆದುರು ಎರಡು ಆಯ್ಕೆಗಳಿವೆ. ನನ್ನ ಅತ್ತೆ ಕನಸುಗಳನ್ನು ಸಾಕಾರಗೊಳಿಸಲು ನಾನು ರಾಜಕೀಯಕ್ಕೆ ಸೇರುತ್ತೇನೆ. ಒಂದೋ ಎಐಡಿಎಂಕೆ ಸೇರುತ್ತೇನೆ, ಇಲ್ಲ ನನ್ನದೇ ಆದ ಹೊಸ ಪಕ್ಷ ಕಟ್ಟುತ್ತೇನೆ. ಜಯಲಲಿತಾ ಜನ್ಮದಿನದಂದು ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಹೇಳುವುದರ ಮೂಲಕ ಕುತೂಹಲವನ್ನು ಕಾಯ್ದಿಟ್ಟಿದ್ದರು.

ವೆಬ್ದುನಿಯಾವನ್ನು ಓದಿ