ಮಹಿಳೆಯನ್ನು 14 ಸೆಕೆಂಡ್‌ಗಳ ಕಾಲ ವಿಕ್ಷೀಸಿದ್ರೆ ಲೈಂಗಿಕ ಕಿರುಕುಳ ನೀಡಿದಂತೆ: ಪೊಲೀಸ್ ಅಧಿಕಾರಿ

ಮಂಗಳವಾರ, 16 ಆಗಸ್ಟ್ 2016 (20:51 IST)
ಒಂದು ವೇಳೆ, ಯಾವುದೇ ವ್ಯಕ್ತಿ 14 ಸೆಕೆಂಡ್‌ಗಳ ಕಾಲ ದುರುಗುಟ್ಟಿ ನೋಡಿದಲ್ಲಿ ಅಂತಹ ವ್ಯಕ್ತಿ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಬಹುದು ಎಂದು ಕೇರಳ ಅಬಕಾರಿ ಆಯುಕ್ತ ಮತ್ತು ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ರಿಷಿರಾಜ್ ಸಿಂಗ್ ನೀಡಿದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
 
ಅಬಕಾರಿ ಆಯುಕ್ತರ ಹೇಳಿಕೆಯನ್ನು ತಳ್ಳಿಹಾಕಿದ ಖ್ಯಾತ ವಕೀಲ ಕಾಮಿನಿ ಜೈಸ್ವಾಲ್, ಎಷ್ಟು ಸೆಕೆಂಡ್‌ಗಳ ಕಾಲ ನೋಡಿದಲ್ಲಿ ಲೈಂಗಿತ ಕಿರುಕುಳ ಕೇಸ್ ದಾಖಲಿಸಬಹುದು ಎನ್ನುವ ಬಗ್ಗೆ ಸಂವಿಧಾನದ ಕಾನೂನಿನಲ್ಲಿಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. 
 
ಅಧಿಕಾರದಲ್ಲಿರುವಂತಹ ವ್ಯಕ್ತಿಗಳು ಅಸಂಭದ್ಧ ಹೇಳಿಕೆಗಳನ್ನು ನೀಡಬಾರದು. ಯಾವುದೇ ಹೇಳಿಕೆ ನೀಡುವ ಮುನ್ನ ತಮ್ಮ ಜವಾಬ್ದಾರಿಯನ್ನು ಅರಿತು ಹೇಳಿಕೆ ನೀಡಬೇಕು. ಕೇವಲ ನೋಡಿದ್ದಾನೆ ಎಂದ ಮಾತ್ರಕ್ಕೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
 
ಲೈಂಗಿಕ ಕಿರುಕುಳಕ್ಕಾಗಿ ದಾಖಲಿಸುತ್ತಿರುವ ಐಪಿಸಿ 354 ಎ ಮತ್ತು 509 ರ ಕಾಯ್ದೆಯಲ್ಲಿ ಯಾವುದೇ ಸಮಯ ನಿಗದಿಯನ್ನು ಉಲ್ಲೇಖಿಸಿಲ್ಲ ಎಂದಿದ್ದಾರೆ.  
 
ಕೊಚ್ಚಿಯಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ ವಿದ್ಯಾರ್ಥಿಗಳ ಸಭೆಯಲ್ಲಿ ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ರಿಷಿರಾಜ್ ಸಿಂಗ್ ಇಂತಹ ಹೇಳಿಕೆ ನೀಡಿದ್ದಾರೆ. ವೇದಿಕೆಯಲ್ಲಿಯೇ ಉಪಸ್ಥಿತರಿದ್ದ ಕೇರಳದ ಕ್ರೀಡಾ ಸಚಿವ ಇ.ಪಿ.ಜಯರಾಜನ್ ಕೂಡಾ ಇಂತಹ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. 
 
ಹಿರಿಯ ಐಪಿಎಸ್ ಅಧಿಕಾರಿ ರಿಷಿರಾಜ್ ಸಿಂಗ್ ಹಲವು ಬಾರಿ ವಿವಾದಕ್ಕೊಳಗಾಗಿದ್ದಾರೆ. ಕಳೆದ ವರ್ಷ ಕೇರಳ ಗೃಹ ಸಚಿವ ರಮೇಶ್ ಚೆನ್ನಿತಾಲಾ ಅವರಿಗೆ ಸೆಲ್ಯೂಟ್ ಹೊಡೆಯುವುದಿಲ್ಲ ಎನ್ನುವ ತಗಾದೆ ತೆಗೆದು ವಿವಾದಕ್ಕೊಳಗಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ