ಈ ಗ್ರಾಮದಲ್ಲಿ ಮದ್ಯ ಕುಡಿದರೆ ತೆಂಗಿನಕಾಯಿ ದಂಡ

ಗುರುವಾರ, 25 ಆಗಸ್ಟ್ 2016 (18:14 IST)
ಮದ್ಯ ಉತ್ಪಾದಿಸಿದರೆ ಅಥವಾ ಕುಡಿದರೆ ತೆಂಗಿನಕಾಯಿಯನ್ನು ದಂಡವಾಗಿ ತೆರಬೇಕು. ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಪಂಚಾಯತ್ ತಂದಿರುವ ಹೊಸ ನಿಯಮವಿದು. 

ಇಲ್ಲಿಯ ಜನರು ಸ್ಥಳೀಯವಾಗಿ ತಯಾರಿಸಿದ ಅಕ್ಕಿ ಬಿಯರ್‌ನ್ನು ಕುಡಿಯುತ್ತಾರೆ. ಮುಂಜಾನೆಯಿಂದ ಕುಡಿಯಲು ಆರಂಭಿಸಿದವರು ದಿನವಿಡಿ ಕುಡಿಯುತ್ತಲೇ ಇರುತ್ತಾರೆ. ಯುವಕರಷ್ಟೇ ಅಲ್ಲ, ಮಕ್ಕಳು ಸಹ ಈ ದುರಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ತೆಂಗಿನಕಾಯಿಯನ್ನು ದಂಡವಾಗಿ ನೀಡುವುದು ಚಿಕ್ಕ ಶಿಕ್ಷೆಯಾಗಿ ಕಾಣಬಹುದು. ಆದರೆ ಸಾರ್ವಜನಿಕವಾಗಿ ಅಪಮಾನವಾಗುತ್ತದೆಯಲ್ಲ. ತಪ್ಪನ್ನು ಮರುಕಳಿಸಿದರೆ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಲಾಗುವುದು ಎಂದು ಮೈಂಗಡಿ ಗ್ರಾಮ ಪಂಚಾಯತ್ ಸರ್ಪಂಚ್ ಸನಿಚರಣ್ ಮಿಂಜ್( 32) ಹೇಳಿದ್ದಾರೆ.
 
ಗ್ರಾಮದಲ್ಲಿ ಮನರಂಜನೆ ಮತ್ತು ವಿದ್ಯುತ್ ಕೊರತೆಯಿಂದ ಗುಂಪುಗುಂಪಾಗಿ ಕುಳಿತುಕೊಳ್ಳುವ ಜನರು ಟೈಮ್ ಪಾಸ್ ಮಾಡಲು ಕುಡಿಯುವುದು ಮತ್ತು ಚಿಟ್ -ಚಾಟ್ ಮಾಡುವುದನ್ನು ಮಾಡುತ್ತಾರೆ. ಗ್ರಾಮದಲ್ಲಿ ಲಿಕ್ಕರ್ ಬ್ಯಾನ್ ಮಾಡುವುದು ಸವಾಲಿನ ಕೆಲಸ. ಅಕ್ಕಿ ಬಿಯರ್ ಕುಡಿಯುವುದು ಇಲ್ಲಿನ ಹಳೆಯ ಸಂಸ್ಕೃತಿ. ಆದರೆ  ಮಕ್ಕಳು ಶಾಲೆಗೆ ಹೋಗುವುದನ್ನು ಬಿಟ್ಟು ಕುಡಿಯಲು ಕುಳಿತಾಗ,  ಯುವಕರು ಕುಡಿತದ ಅಮಲಿನಲ್ಲಿ ಕೆಲಸ ಮಾಡುವುದನ್ನೇ ಬಿಟ್ಟಾಗ ಕಳವಳ ಪಡುವಂತ ಪರಿಸ್ಥಿತಿ ನಿರ್ಮಾಣವಾಯಿತು. ಕುಡಿತ ನಿಲ್ಲಿಸುವಂತೆ ಜನರಿಗೆ ಜಾಗೃತಿ ಮೂಡಿಸುವುದು ಬಹಳ ಸವಾಲಿನ ಕೆಲಸ ಎಂದು ಪದವೀಧರರಾಗಿರುವ ಅವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ