India Pakistan: ಎಲ್ಲರೂ ಇಂದಿರಾ ಗಾಂಧಿಯಾಗಲು ಸಾಧ್ಯವಿಲ್ಲ, ಮೋದಿಗೆ ಟೀಕೆ
ಈ ಹಿಂದೆ 1971 ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಮಾಡುವಾಗ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಅಂದು ಅಮೆರಿಕಾ ಮಧ್ಯಪ್ರವೇಶಿಸಿ ಕದನ ವಿರಾಮಕ್ಕೆ ಸಲಹೆ ನೀಡಿದರೂ ಇಂದಿರಾ ಗಾಂಧಿ ಒಪ್ಪದೇ ಪಾಕಿಸ್ತಾನದ ವಿರುದ್ಧ ಸೇನೆ ಕಳುಹಿಸಿ ಹೋರಾಡಿದ್ದರು.
ಆದರೆ ಇಂದು ಪ್ರಧಾನಿ ಮೋದಿ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಹುಟ್ಟಡಗಿಸುತ್ತಾರೆ ಎಂದೇ ಎಲ್ಲರೂ ನಂಬಿದ್ದರು. ಪಾಕಿಸ್ತಾನವನ್ನು ಭೂಪಟದಿಂದಲೇ ನಿರ್ನಾಮ ಮಾಡಿ ಬಿಡುತ್ತಾರೆ ಎಂಬಷ್ಟು ಆಕ್ರೋಶವಿತ್ತು. ಭಾರತದ ತಯಾರಿಯೂ ಅದೇ ರೀತಿ ಇತ್ತು. ಆದರೆ ಅಮೆರಿಕಾ ಕದನ ವಿರಾಮ ನಡೆಸುವಂತೆ ಸಲಹೆ ನೀಡಿದ್ದಕ್ಕೆ ಭಾರತ ತಕ್ಷಣವೇ ಒಪ್ಪಿಕೊಂಡಿದ್ದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.
ಇಷ್ಟು ಬೇಗ ಅಮೆರಿಕಾ ಸಲಹೆಗೆ ಭಾರತ ಒಪ್ಪಬಾರದಿತ್ತು. ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಮೂರನೇ ರಾಷ್ಟ್ರ ಮೂಗು ತೂರಿಸಲು ಭಾರತ ಒಪ್ಪಿಕೊಂಡಿದ್ದು ಯಾಕೆ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಇಂದಿರಾ ಗಾಂಧಿಯಂತೆ ಮೋದಿ ಕೂಡಾ ಧೈರ್ಯ ತೋರಬೇಕಿತ್ತು ಎನ್ನುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು, ಪಾಕ್ ಪ್ರಧಾನಿ ಶಹಬಾಜ್ ಷರೀಫ್ ನಾವೇ ಗೆದ್ದಿದ್ದು ಎಂದು ಬೀಗುತ್ತಿರುವುದು ಭಾರತೀಯ ರಕ್ತ ಕುದಿಯುವಂತೆ ಮಾಡಿದೆ.