ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟದ ಎಲ್ಲಾ ಪಕ್ಷಗಳೂ ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ಆಮ್ ಆದ್ಮಿ ಪಕ್ಷ, ಟಿಎಂಸಿ, ಡಿಎಂಕೆ ಸೇರಿದಂತೆ ಪ್ರಮುಖ ಪಕ್ಷಗಳ ಸಂಸದರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ನಿನ್ನೆಯ ಬಜೆಟ್ ಕೇವಲ ಎನ್ ಡಿಎ ಬಜೆಟ್ ಆಗಿತ್ತು. ಇಂಡಿಯಾ ಒಕ್ಕೂಟಗಳ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಕ್ಕೆ ಏನೂ ಕೊಡುಗೆಯಿಲ್ಲ ಎಂದು ವಿಪಕ್ಷಗಳು ಆರೋಪಿಸಿವೆ.
ಇಂತಹದ್ದೊಂದು ಪಕ್ಷಪಾತದ ಬಜೆಟ್ ಮಂಡಿಸಿರುವುದಕ್ಕೆ ಮೋದಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಲಾಯಿತು. ನಿನ್ನೆಯ ಬಜೆಟ್ ನಲ್ಲಿ ಎನ್ ಡಿಎ ಪಾಲುದಾರ ಪಕ್ಷಗಳಾದ ಟಿಡಿಪಿ ಆಡಳಿತವಿರುವ ಆಂಧ್ರಪ್ರದೇಶ, ಜೆಡಿಯು ಅಧಿಕಾರದಲ್ಲಿರುವ ಬಿಹಾರಕ್ಕೆ ಬಹುಪಾಲು ನೀಡಲಾಗಿದೆ.
ಹೀಗಾಗಿ ಇದು ತಮ್ಮ ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆಯೇ ಲೇವಡಿ ಮಾಡಿದ್ದರು. ಅಲ್ಲದೆ, ಇದು ಕಾಂಗ್ರೆಸ್ ಪ್ರಣಾಳಿಕೆಯನ್ನೇ ಕಾಪಿ ಮಾಡಿರುವ ಬಜೆಟ್ ಎಂದು ಮಲ್ಲಿಕಾರ್ಜುನ ಖರ್ಗೆ, ಪಿ ಚಿದಂಬರಂ ಟೀಕಿಸಿದ್ದರು. ಇಂದು ಸರ್ವ ಪಕ್ಷಗಳು ಸಂಸತ್ ಹೊರಗೆ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆ ಸಂಸತ್ ಅಧಿವೇಶನದಲ್ಲೂ ಮುಂದುವರಿಯಲಿದೆ.