ನವದೆಹಲಿ: ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಭಾರತವು ಹೊಸ ದಾಖಲೆ ಬರೆದಿದೆ. ಕಳೆದ ವಾರವಷ್ಟೇ ಭಾರತದಲ್ಲಿ ಒಂದೇ ದಿನದಲ್ಲಿ 1 ಕೋಟಿ ಕೊರೊನಾ ಲಸಿಕೆ ವಿತರಣೆ ಮಾಡಲಾಗಿತ್ತು, ಇದೀಗ ಮತ್ತೊಂದು ದಾಖಲೆ ಸೃಷ್ಟಿಸಿದ್ದು ಮಂಗಳವಾರ ಸಂಜೆ 8 ಗಂಟೆಯವರೆಗೆ 1.21 ಕೋಟಿ ಕೊರೊನಾ ಲಸಿಕೆಯನ್ನು ವಿತರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಗಸ್ಟ್ 27ರಂದು ಭಾರತದಲ್ಲಿ 1,08,99,699 ಕೊರೊನಾ ಲಸಿಕೆಯನ್ನು ನೀಡಲಾಗಿತ್ತು, ಇದುವರೆಗಿನ ಲಸಿಕೀಕರಣದಲ್ಲಿ ಇದು ಅತಿ ದೊಡ್ಡ ಸಂಖ್ಯೆಯಾಗಿತ್ತು. ಇದೀಗ ತನ್ನ ದಾಖಲೆಯನ್ನೇ ಭಾರತವು ಮುರಿದಿದೆ. ರಾತ್ರಿ 8 ಗಂಟೆಯಷ್ಟೊತ್ತಿಗೆ ದೇಶದಲ್ಲಿ 1,21,99,230 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿ ಒಟ್ಟು 18 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಜುಲೈಗಿಂತ ಶೇ.33ರಷ್ಟು ಹೆಚ್ಚು ಡೋಸ್ಗಳನ್ನು ನೀಡಲಾಗಿದೆ. ಜುಲೈನಲ್ಲಿ ಒಟ್ಟು 13.45 ಕೋಟಿ ಡೋಸ್ಗಳನ್ನು ನೀಡಲಾಗಿತ್ತು.
ಭಾರತದಲ್ಲಿ ಇದುವರೆಗೆ 50 ಕೋಟಿ ಮಂದಿ ಮೊದಲ ಡೋಸ್ ಪಡೆದಿದ್ದು, 15 ಕೋಟಿ ಮಂದಿ ಎರಡೂ ಡೋಸ್ಗಳನ್ನು ಪಡೆದಿದ್ದಾರೆ ಒಟ್ಟು ಇದುವರೆಗೆ 65 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.
ಅಮೆರಿಕದಲ್ಲಿ ನೀಡಲಾದ ಕೊರೊನಾ ಲಸಿಕೆಗಿಂತ ಮೂರು ಪಟ್ಟು ಹೆಚ್ಚು ಲಸಿಕೆಯನ್ನು ಭಾರತದಲ್ಲಿ ನೀಡಲಾಗಿದೆ. ಕಳೆದ ಒಂದು ವಾರದಿಂದ ನಿತ್ಯ 74 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ನ್ಯೂಜಿಲೆಂಡ್ಗಿಂತಲೂ ಎರಡು ಪಟ್ಟು ಲಸಿಕೆಯನ್ನು ಭಾರತದಲ್ಲಿ ನೀಡಲಾಗಿದೆ.
ಪಾಕಿಸ್ತಾನದಲ್ಲಿ ನೀಡಲಾಗಿರುವ ಕೊರೊನಾ ಲಸಿಕೆಗಿಂತಲೂ ಹೆಚ್ಚು ಲಸಿಕೆಯನ್ನು ಉತ್ತರ ಪ್ರದೇಶ ಒಂದೇ ರಾಜ್ಯದಲ್ಲಿ ನೀಡಲಾಗಿದೆ. ಪಾಕಿಸ್ತಾನ, ಜರ್ಮನಿ, ಯುಕೆ, ಫ್ರಾನ್ಸ್, ರಷ್ಯಾ, ಇಟಲಿ, ಸ್ಪೇನ್ ಹಾಗೂ ಆಸ್ಟ್ರೇಲಿಯಾದಲ್ಲಿ ನೀಡಲಾಗಿರುವ ಕೊರೊನಾ ಲಸಿಕೆಗಿಂತ ಹೆಚ್ಚು ಲಸಿಕೆಯನ್ನು ಭಾರತದಲ್ಲಿ 10 ರಾಜ್ಯಗಳಲ್ಲಿ ನೀಡಲಾಗಿದೆ.
ಹಿಮಾಚಲಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಆಗಸ್ಟ್ 31ರವರೆಗೆ ಉತ್ತರ ಪ್ರದೇಶದಲ್ಲಿ 12 ಲಕ್ಷಕ್ಕೂ ಅಧಿಕ ಕೊರೊನಾ ಲಸಿಕೆ ನೀಡಲಾಗಿದೆ.
ಅಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶದಲ್ಲೂ 5 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಬಿಹಾರದಲ್ಲಿ ಇದುವರೆಗೆ 15 ಲಕ್ಷಕ್ಕೂ ಅಧಿಕ ಕೊರೊನಾ ಲಸಿಕೆ ವಿತರಿಸಲಾಗಿದೆ.
60 ವರ್ಷ ಮೇಲ್ಪಟ್ಟ 13.36 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ ಹಾಗೆಯೇ 45-60 ವರ್ಷದೊಳಗಿನ 19.80 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. 18-44 ವರ್ಷದ 31.67 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ.
ಕೆಲ ದಿನಗಳಿಂದ ಭಾರತದಲ್ಲಿ ಇಳಿಕೆಯ ಹಾದಿಯಲ್ಲಿದ್ದ ಕೊರೊನಾ ಸೋಂಕು ಮತ್ತೆ ಏರಿಕೆಯಾಗಲು ಆರಂಭವಾಗಿದ್ದು, ದೇಶದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 30,941 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 350 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.
ಮಂಗಳವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,26,95,030ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,37,830ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಮಂಗಳವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,27,68,880ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,38,560ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,70,640ಕ್ಕೆ ತಲುಪಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 36,275 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,19,59,680ಕ್ಕೆ ತಲುಪಿದೆ.