ನವದೆಹಲಿ:ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಲ್ಲುಗಳನ್ನು ಗುಡ್ಡೆ ಹಾಕಿಕೊಂಡು ರಕ್ಷಣಾ ಸಿಬಂದಿ ಮೇಲೆ ಎಸೆಯುವ ಕಿಡಿಗೇಡಿಗಳನ್ನು ನಿಯಂತ್ರಿಸಲು ಭಾರತ ಸೇನೆ ಮಾಡಿದ ಹರಸಾಹಸಗಳೆಲ್ಲವೂ ವಿಫಲವಾಗಿವೆ. ದುಷ್ಕರ್ಮಿಗಳು ಭದ್ರತಾಪಡೆಗಳ ಮೇಲೆ ಕಲ್ಲುತೂರಾಟ ನಡೆಸುತ್ತಲೇ ಇದ್ದಾರೆ. ಈ ಹಿನ್ನಲೆಯಲ್ಲಿ ದುಷ್ಕರ್ಮಿಗಳ ಈ ಕೃತ್ಯ ನಿಯಂತ್ರಣಕ್ಕೆ ಸೇನೆ ಈಗ ಸ್ಟಿಂಕ್ ಬಾಂಬ್ ಪ್ರಯೋಗಕ್ಕೆ ಮುಂದಾಗಿದೆ. ಅಂದರೆ ದುರ್ವಾಸನೆಯ ಬಾಂಬ್ ನ್ನು ಸೇನೆ ಕೈಗೆತ್ತಿಗೊಳ್ಳಲಿದೆ.
ಪುಟ್ಟ ಕ್ಯಾಪ್ಸೂಲ್ ನಂತಿರುವ ಈ ಬಾಂಬ್ ಅನ್ನು ಪೆಲೆಟ್ ಗನ್ ಹಾಗೂ ಅಶ್ರುವಾಯು ಪ್ರಯೋಗಿಸಲು ಬಳಸುವ ಗನ್‌ಗಳಲ್ಲಿ ಬುಲೆಟ್ ರೀತಿ ಬಳಸಬಹುದು. ಹೀಗೆ ಬಳಸಿದ ಬಾಂಬ್ ಉದ್ರಿಕ್ತ ಗುಂಪಿನ ನಡುವೆ ಬಿದ್ದಾಗ ಅದರಿಂದ ಮಾನವನ ಮಲದ ವಾಸನೆ ಹೋಲುವ ದುರ್ಗಂಧ ಹೊರಹೊಮ್ಮುತ್ತದೆ. ಇದನ್ನು ಸಹಿಸಿಕೊಳ್ಳಲಾಗದೆ ಕಲ್ಲೆಸೆತಗಾರರು ದಿಕ್ಕಾಪಾಲಾಗಿ ಓಡುತ್ತಾರೆ ಎಂಬುದು ಸೇನೆಯ ಲಾಜಿಕ್.
ಉತ್ತರ ಪ್ರದೇಶದ ಕನೌಜ್‌ನ ಫ್ರಾಗ್ರೆನ್ಸ್ ಆ್ಯಂಡ್ ಫ್ಲೇವರ್ ಡೆವಲಪ್‌ಮೆಂಟ್ ಸೆಂಟರ್‌ನ (ಎಫ್ಎಫ್ಡಿಸಿ) ವಿಜ್ಞಾನಿಗಳು ಈ 'ದುರ್ಗಂಧದ ಬಾಂಬ್ ತಯಾರಿಸಿದ್ದಾರೆ. ಅಮೋನಿಯಂ ಸಲ್ಫೆಡ್, ಹೈಡ್ರೋಜನ್ ಸಲ್ಫೆಡ್ ಒಳಗೊಂಡಂತೆ ಒಟ್ಟು ಎಂಟು ರಾಸಾಯನಿಕ ಬಳಸಿ ಈ ಬಾಂಬ್ ತಯಾರಿಸಲಾಗುತ್ತದೆ. ಬಾಂಬ್ ಪ್ರಯೋಗಿಸಿದಾಗ ಸಹಿಸಿಕೊಳ್ಳಲು ಅಸಾಧ್ಯವಾಗಿರುವಂಥ ದುರ್ನಾತ ಅದರಿಂದ ಹೊರಹೊಮ್ಮುತ್ತದೆ. ಆದರೆ ಇದರಿಂದ ಯಾವುದೇ ದುಷ್ಪರಿಣಾಮಗಳಿಲ್ಲ.