ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ 2 ದಿನಗಳ ಕಾಲ ಕುವೈತ್ ಪ್ರವಾಸ ಕೈಗೊಂಡಿದ್ದಾರೆ. ಈ ಮೂಲಕ 43 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಗಲ್ಫ್ ರಾಷ್ಟ್ರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಕುವೈತ್ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. ದ್ವಿಪಕ್ಷೀಯ ಸಂಬಂಧ ಮತ್ತು ಇಂಧನ ಸಹಕಾರ ವೃದ್ಧಿಗಾಗಿ ಮೋದಿ ಕುವೈತ್‌ಗೆ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಕುವೈತ್‌ನಲ್ಲಿಂದು ನಡೆಯುವ ʻಹಾಲಾ ಮೋದಿ ಮೆಗಾ ಡಯಾಸ್ಪೊರಾʼ ಕಾರ್ಯಕ್ರಮಕ್ಕೆ ಈಗಾಗಲೇ ವೇದಿಕೆ ಸಿದ್ಧಪಡಿಸಲಾಗಿದೆ. ಸುಮಾರು 5,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ಈ ಕುರಿತು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಅರಣು ಕುಮಾರ್ ಚಟರ್ಜಿ ಮಾಹಿತಿ ನೀಡಿದ್ದಾರೆ. ಉಭಯ ರಾಷ್ಟ್ರಗಳ ದ್ವಿಪಕ್ಷಿಯ ಸಂಬಂಧ ಮತ್ತಷ್ಟು ಅಭಿವೃದ್ಧಿಪಡಿಸುವ ಸಲುವಾಗಿ ಮೋದಿ ಭೇಟಿ ನೀಡುತ್ತಿದ್ದಾರೆ. ಮೊದಲು ಬಯಾನ್ ಅರಮನೆಯಲ್ಲಿ ಮೋದಿ ಗೌರವಾನ್ವಿತ ಗೌರವ ಸ್ವೀಕರಿಸಲಿದ್ದಾರೆ. ಬಳಿಕ ಕುವೈತ್ ನಾಯಕತ್ವದೊಂದಿಗೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿಗಳ ಈ ಭೇಟಿಯು ಭವಿಷ್ಯದಲ್ಲಿ ಉತ್ತಮ ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ. ಭಾರತ ಮತ್ತು ಗಲ್ಫ್ ಸಹಕಾರ ಮಂಡಳಿಯ ನಡುವಿನ ಬಾಂಧವ್ಯ ಹೆಚ್ಚಿಸುತ್ತದೆ. ಕುವೈತ್‌ನಲ್ಲಿ ಸದ್ಯ 10 ಲಕ್ಷ ಭಾರತೀಯರು ಇದ್ದಾರೆ. ಈ ಕಾರಣಕ್ಕಾಗಿ ಅಲ್ಲಿನ ಕಾರ್ಮಿಕ ಸಮುದಾಯಕ್ಕೂ ಭೇಟಿ ನೀಡುವ ಯೋಜನೆ ಇದೆ ಎಂದು ಮಾಹಿತಿ ನೀಡಿದ್ದಾರೆ.